ಎರಡೇ ದಿನದಲ್ಲಿ ಟೆಸ್ಟ್ ಪಂದ್ಯ ಜಯಿಸಿದ ದ.ಆಫ್ರಿಕ

Update: 2017-12-27 18:27 GMT

ಪೋರ್ಟ್ ಎಲಿಜಬೆತ್, ಡಿ.27: ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಬೇಗನೆ ಕೊನೆಗೊಂಡ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡ ಝಿಂಬಾಬ್ವೆಯನ್ನು ಇನಿಂಗ್ಸ್ ಹಾಗೂ 120 ರನ್‌ಗಳ ಅಂತರದಿಂದ ಸೋಲಿಸಿದೆ.

ಬುಧವಾರ ಎರಡೇ ದಿನದಲ್ಲಿ ಕೊನೆಗೊಂಡ ಅಹರ್ನಿಶಿ ಚತುರ್ದಿನ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡ ಕೇವಲ 907 ಎಸೆತಗಳಲ್ಲಿ ಫಲಿತಾಂಶ ದಾಖಲಿಸಿತು. ಇದು ಎಸೆತಗಳಲ್ಲಿ 2ನೇ ಅತ್ಯಂತ ಕಿರಿದಾದ ಪಂದ್ಯವಾಗಿದೆ. 2005ರಲ್ಲಿ ಕೇಪ್‌ಟೌನ್‌ನಲ್ಲಿ ಝಿಂಬಾಬ್ವೆ ತಂಡ ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್‌ನಲ್ಲಿ 2ನೇ ದಿನದಾಟದಲ್ಲಿ ಸೋಲುಂಡಿತ್ತು. ಕಳೆದ 50 ವರ್ಷಗಳಲ್ಲಿ ಟೆಸ್ಟ್ ಪಂದ್ಯವೊಂದು ಎರಡು ದಿನಗಳಲ್ಲಿ ಕೊನೆಗೊಂಡಿದ್ದು ಇದು 5ನೇ ಬಾರಿ. ದಕ್ಷಿಣ ಆಫ್ರಿಕ ಬೌಲರ್‌ಗಳು ಝಿಂಬಾಬ್ವೆಗೆ ಕೇವಲ 198 ರನ್ ನೀಡಿ ಒಟ್ಟು 20 ವಿಕೆಟ್‌ಗಳನ್ನು ಉರುಳಿಸಿದರು. ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್ ನಲ್ಲಿ 309 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಝಿಂಬಾಬ್ವೆ ಮೊದಲ ಇನಿಂಗ್ಸ್ ನಲ್ಲಿ 68 ರನ್‌ಗೆ ಆಲೌಟಾಗಿತ್ತು. ಮೊರ್ನೆ ಮೊರ್ಕೆಲ್(5-21) ಐದು ವಿಕೆಟ್ ಪಡೆದರು. ಫಾಲೋ-ಆನ್‌ಗೆ ಸಿಲುಕಿ 2ನೇ ಇನಿಂಗ್ಸ್ ಆಡಿದ ಝಿಂಬಾಬ್ವೆ ಕೇಶವ ಮಹಾರಾಜ್(5-59) ಸ್ಪಿನ್ ಮೋಡಿಗೆ ತತ್ತರಿಸಿ ಕೇವಲ 121 ರನ್‌ಗೆ ಆಲೌಟಾಯಿತು.

ದಕ್ಷಿಣ ಆಫ್ರಿಕದ ಪರ ಶತಕ ಸಿಡಿಸಿದ್ದ ಆರಂಭಿಕ ಆಟಗಾರ ಮಾರ್ಕ್ರಮ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

 ಆರಂಭಿಕ ಆಟಗಾರ ಮಾರ್ಕ್ರಮ್ ಶತಕ ಹಾಗೂ ನಾಯಕ ಎಬಿ ಡಿವಿಲಿಯರ್ಸ್ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕ ತಂಡ ಝಿಂಬಾಬ್ವೆ ಮೊದಲ ಇನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 309 ರನ್ ಗಳಿಸಿದೆ.

  ಇನಿಂಗ್ಸ್ ಆರಂಭಿಸಿದ ಎಲ್ಗರ್(31) ಹಾಗೂ ಮಾರ್ಕ್ರಮ್ ಮೊದಲ ವಿಕೆಟ್‌ಗೆ 72 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಎಲ್ಗರ್ ಹಾಗೂ ಹಾಶಿಮ್ ಅಮ್ಲ(5) ಬೆನ್ನುಬೆನ್ನಿಗೆ ಔಟಾದರು. ಆಗ ಮೂರನೇ ವಿಕೆಟ್‌ಗೆ 96 ರನ್ ಜೊತೆಯಾಟ ನಡೆಸಿದ ಮಾರ್ಕ್ರಮ್ ಹಾಗೂ ಎಬಿ ಡಿವಿಲಿಯರ್ಸ್ ತಂಡವನ್ನು ಆಧರಿಸಿದರು.

ಡಿವಿಲಿಯರ್ಸ್(53 ರನ್,65 ಎಸೆತ, 5 ಬೌಂಡರಿ, 1 ಸಿಕ್ಸರ್) ಔಟಾದ ಬಳಿಕ ಬವುಮಾ(44) ಅವರೊಂದಿಗೆ ಕೈಜೋಡಿಸಿದ ಮಾರ್ಕ್ರಾಮ್ 4ನೇ ವಿಕೆಟ್‌ಗೆ 78 ರನ್ ಸೇರಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಮಾರ್ಕ್ರಮ್‌ಹಾಗೂ ಬವುಮಾ ಔಟಾದ ಬಳಿಕ ದಕ್ಷಿಣ ಆಫ್ರಿಕದ ಬ್ಯಾಟಿಂಗ್ ಸೊರಗಿತು.

ಝಿಂಬಾಬ್ವೆ ಪರ ಜಾರ್‌ವಿಸ್(3-57),ಮಪೋಫು(3-58) ಹಾಗೂ ಗ್ರೆಮ್ ಕ್ರೀಮರ್(2-66) 8 ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News