ಮಂಗಳೂರು: ಬ್ಯಾನರ್, ಹೋರ್ಡಿಂಗ್, ಕಟೌಟ್ ತೆರವು ಕಾರ್ಯಾಚರಣೆ

Update: 2017-12-28 10:33 GMT

ಮಂಗಳೂರು, ಡಿ.28: ನಗರದ ಸೌಂದರ್ಯಕ್ಕೆ ಕುಂದುಂಟಾಗುವ ರೀತಿಯಲ್ಲಿ ಮತ್ತು ಯಾವುದೇ ಪರವಾನಿಗೆ ಇಲ್ಲದೆ ಅಲ್ಲಲ್ಲಿ ಹಾಕಲಾದ ಬ್ಯಾನರ್, ಹೋರ್ಡಿಂಗ್, ಕಟೌಟ್ ಇತ್ಯಾದಿಯನ್ನು ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ವರ್ಗವು ಗುರುವಾರ ತೆರವು ಕಾರ್ಯಾಚರಣೆ ನಡೆಸಿತು.

ಮನಪಾ ಆಯುಕ್ತ ಮುಹಮ್ಮದ್ ನಝೀರ್ ನೇತೃತ್ವದಲ್ಲಿ ನಗರದ ಹಂಪನಕಟ್ಟೆ, ಪುರಭವನ, ಲೇಡಿಹಿಲ್, ಲಾಲ್‌ಬಾಗ್ ಮತ್ತಿತರ ಕಡೆ ವಿವಿಧ ಪಕ್ಷದ ಮತ್ತು ಸಂಘಟನೆಗಳ ಬ್ಯಾನರ್, ಕಟೌಟ್‌ಗಳನ್ನು ತೆರವುಗೊಳಿಸಿದರು.

ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಅಭಿನಂದನೆ ಕೋರಿರುವ, ವಿವಿಧ ಸಂಘಟನೆಗಳ ಕಾರ್ಯಕ್ರಮಗಳಿಗೆ ಶುಭ ಕೋರಿ ಹಾಕಲಾದ ಬ್ಯಾನರ್, ಕಟೌಟ್‌ಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಮನಪಾಕ್ಕೆ ದೂರು ಸಲ್ಲಿಸಿದ್ದರು.

ನಗರದ ಸ್ವಚ್ಛತೆಯ ಹಿತದೃಷ್ಟಿಯಿಂದ ಅವುಗಳನ್ನು ಕಾರ್ಯಾಚರಣೆಗೊಳಿಸುವುದು ಕೂಡ ಅಧಿಕಾರಿಗಳಿಗೆ ಅನಿವಾರ್ಯವಾಗಿತ್ತು. ಅದರಂತೆ ಗುರುವಾರ ಬೆಳಗ್ಗೆ ಆರಂಭಿಸಲಾದ ಕಾರ್ಯಾಚರಣೆಯು ಮಧ್ಯಾಹ್ನದವರೆಗೂ ಮುಂದುವರಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News