ಉಬರ್ ಚಾಲಕನಿಂದ ಮಹಿಳೆಯ ಅತ್ಯಾಚಾರ, ಕೊಲೆ
ಬೈರೂತ್, ಡಿ.28: ಬ್ರಿಟನ್ ಮಹಿಳೆಯೊಬ್ಬರ ಮೇಲೆ ಉಬರ್ ಕಾರು ಚಾಲಕ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಘಟನೆ ಲೆಬನಾನ್ ರಾಜಧಾನಿ ಬೈರೂತ್‌ನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಬ್ರಿಟಿಷ್ ರಾಯಭಾರ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಮೂವತ್ತರ ಹರೆಯದ ರೆಬೆಕಾ ಡೈಕ್ಸ್ ಎಂದು ಗುರುತಿಸಲಾಗಿದೆ.
ಆಕೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಆರೋಪಿಯನ್ನು ತಾರೆಕ್ ಹವ್ಚೆ ಎಂದು ಗುರುತಿಸಲಾಗಿದ್ದು ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಡೈಕ್ಸ್ ಚಿಕ್ಕ ಬಟ್ಟೆ ಧರಿಸಿದ್ದಳು ಮತ್ತು ಅವಳು ನೋಡಲು ಸುಂದರವಾಗಿದ್ದಳು. ಹಾಗಾಗಿ ಆಕೆಯನ್ನು ಆತ್ಯಾಚಾರ ಮಾಡಿದೆ ಎಂದು ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ಉಬರ್ ಸಂಸ್ಥೆಯ ಕಾರು ಚಾಲಕನಾಗಿ ದುಡಿಯುತ್ತಿದ್ದ ಆರೋಪಿ ಈ ಹಿಂದೆಯೂ ಹಲವಾರು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉಬರ್ ಸಂಸ್ಥೆಯು ಚಾಲಕರನ್ನು ನೇಮಿಸುವಾಗ ಅವರ ಹಿನ್ನೆಲೆಯನ್ನು ಪರಿಶೀಲಿಸುವುದಿಲ್ಲ ಎಂದು ಲೆಬನಾನ್‌ನ ಆಂತರಿಕ ಸಚಿವರಾದ ನೊಹದ್ ಮಚ್ನೌಕ್ ಆರೋಪಿಸಿದ್ದಾರೆ.