×
Ad

ಇಂಗ್ಲೆಂಡ್ ಗೆ 164 ರನ್ ಗಳ ಮುನ್ನಡೆ

Update: 2017-12-28 23:44 IST

ಮೆಲ್ಬೋರ್ನ್, ಡಿ.28: ಆರಂಭಿಕ ದಾಂಡಿಗ ಅಲಿಸ್ಟರ್ ಕುಕ್ ಅವರ ಅಜೇಯ ದ್ವಿಶತಕದ ನೆರವಿನಲ್ಲಿ ಇಂಗ್ಲೆಂಡ್ ತಂಡ ನಾಲ್ಕನೇ ಕ್ರಿಕೆಟ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ 164 ರನ್‌ಗಳ ಮುನ್ನಡೆ ಸಾಧಿಸಿದೆ.

ಟೆಸ್ಟ್‌ನ ಮೂರನೇ ದಿನದಾಟದಂತ್ಯಕ್ಕೆ ಗುರುವಾರ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 144 ಓವರ್‌ಗಳಲ್ಲಿ 491 ರನ್ ಗಳಿಸಿದೆ.

ಅಲಿಸ್ಟರ್ ಕುಕ್ ಔಟಾಗದೆ 244 ರನ್ ಮತ್ತು ಇನ್ನೂ ಖಾತೆ ತೆರೆಯದ ಜೇಮ್ಸ್ ಆ್ಯಂಡರ್ಸನ್ ಕ್ರೀಸ್‌ನಲ್ಲಿದ್ದಾರೆ.

 ಎರಡನೇ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟದಲ್ಲಿ 192 ರನ್ ಗಳಿಸಿದ್ದ ಇಂಗ್ಲೆಂಡ್ ಆಟ ಮುಂದುವರಿಸಿ ಈ ಮೊತ್ತಕ್ಕೆ 299 ರನ್ ಸೇರಿಸಿತು.

 ಔಟಾಗದೆ 104 ರನ್ ಗಳಿಸಿದ್ದ ಕುಕ್ ಮತ್ತು 49 ರನ್ ಗಳಿಸಿದ್ದ ನಾಯಕ ಜೋ ರೂಟ್ ಬ್ಯಾಟಿಂಗ್ ಮುಂದುವರಿಸಿ ಮೂರನೇ ವಿಕೆಟ್‌ಗೆ 130 ರನ್ ಸೇರಿಸುವ ಮೂಲಕ ಸ್ಕೋರ್‌ನ್ನು 218ಕ್ಕೆ ತಲುಪಿಸಿದರು. ರೂಟ್ 61 ರನ್ ಗಳಿಸಿ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಲಿನ್‌ಗೆ ಕ್ಯಾಚ್ ನೀಡಿದರು.

  ಡಾವಿಡ್ ವಿಲಾನ್ 14 ರನ್, ವಿಕೆಟ್ ಕೀಪರ್ ಜೋನಿ ಬೈರ್‌ಸ್ಟೋವ್, ಮೋಯಿನ್ 20ರನ್, ಕ್ರಿಸ್ ವೋಕ್ಸ್ 26ರನ್, ಟಾಮ್ ಕುರನ್ 4ರನ್ ಗಳಿಸಿ ಔಟಾದರು. 9ನೇ ವಿಕೆಟ್‌ಗೆ ಸ್ಟುವರ್ಟ್ ಬ್ರಾಡ್ ಮತ್ತು ಕುಕ್ 100 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್ 470ರ ಗಡಿ ದಾಟಲು ನೆರವಾದರು. ಬ್ರಾಡ್ 56 ರನ್(63ಎ, 8ಬೌ,1ಸಿ) ಗಳಿಸಿ ಔಟಾದರು. ಆಸ್ಟ್ರೇಲಿಯದ ಜೋಶ್ ಹೇಝಲ್‌ವುಡ್ , ನಥಾನ್ ಲಿನ್ ಮತ್ತು ಪ್ಯಾಟ್ ಕಮಿನ್ಸ್ ತಲಾ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್ ವಿವರ

►ಆಸ್ಟ್ರೇಲಿಯ ಮೊದಲ ಇನಿಂಗ್ಸ್ 327

 ►ಇಂಗ್ಲೆಂಡ್ ಮೊದಲ ಇನಿಂಗ್ಸ್ 144 ಓವರ್‌ಗಳಲ್ಲಿ 491/9

( ಕುಕ್ ಔಟಾಗದೆ 244, ರೂಟ್ 61, ಬ್ರಾಡ್ 56; ಹೇಝಲ್‌ವುಡ್ 95ಕ್ಕೆ 3).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News