ಆತ್ಮೀಯತೆಗೆ ಸಾಕ್ಷಿಕೊಡಿ ಇಲ್ಲವಾದರೆ ಬಿಟ್ಟುಬಿಡಿ

Update: 2017-12-28 18:15 GMT

ಭಾಗ-2

‘ಪ್ರಬೋಧ’ ಪತ್ರಿಕೆಯ ಸಂಪಾದಕ ಮಹೋದಯರಿಗೆ ನಾವು ಹೇಳುವುದಿಷ್ಟೆ, ಸಮಾಜದಲ್ಲೊಂದು ಗಾದೆಯಿದೆ, ಬಾಯಿಬಡಕರು ಬೇಕು, ಆದರೆ ಬೈಗಳನ್ನು ಉಪಯೋಗಿಸುವವರು ಬೇಡ. ಬೈಗಳನ್ನು ಉಪಯೋಗಿಸುವವರು ಬೇಕು, ಆದರೆ ಶೀಲಶೂನ್ಯತೆ ಬೇಡ. ‘ಪ್ರಬೋಧ’ ಪತ್ರಿಕೆಯ ಸಂಪಾದಕರು ದೊಡ್ಡಸ್ತಿಕೆ ಬಡಿದು ಹೇಳಿಕೊಳ್ಳುವಷ್ಟು ಅವರ ವಿಚಾರ ಮೇಲ್ದರ್ಜೆಯದ್ದಾಗಿದ್ದಿದ್ದರೆ ನಮಗೆ ಉಪದೇಶ ಮಾಡುವ ಅಧಿಕಾರ ಅವರಿಗಿದೆ ಎಂದು ನಾವು ಒಪ್ಪಿಕೊಳ್ಳಬಹುದಿತ್ತು. ಆದರೆ ಅವರ ವಿಚಾರಹೀನತೆ ಅವರ ಹೇಳಿಕೆಯಲ್ಲೇ ಪ್ರಕಟವಾಗುತ್ತದೆ. ಅವರು ಹೇಳಿದ್ದೇನೆಂದರೆ, ‘‘ಭಾರತದಲ್ಲಿ ಮುಸಲ್ಮಾನರು ಹಾಗೂ ಕ್ರಿಶ್ಚಿಯನ್ನರೇ ಇರದಿದ್ದ ಕಾಲದಲ್ಲಿ ಬೇರೆ ರೀತಿಯ ಅಸ್ಪಶ್ಯತೆಯಿತ್ತು; ಆದರೆ ಈಗಿನ ಕಾಲದಲ್ಲಿ ಬೇರೆ ಧರ್ಮ ಹಾಗೂ ಗೋಮಾಂಸ ಭಕ್ಷಕರಂತಹ ಜನ ಮೇಲ್ಜಾತಿಯಲ್ಲಿ ಸೇರಲ್ಪಡುತ್ತಿರುವಾಗ ರಾಮಕೃಷ್ಣರನ್ನು ಭಜಿಸುವ ಹಾಗೂ ಗೋಮಾತೆಯನ್ನು ಪೂಜಿಸುವಂತಹ ಸ್ವಧರ್ಮೀಯ ಜನ ಹಳೆಯ ಕಾಲದಂತೆ ಅಸ್ಪಶ್ಯರೆಂದೇ ಪರಿಗಣಿಸಿರಬೇಕು ಅನ್ನುವ ಈ ಅನ್ಯಾಯವನ್ನು ಇನ್ನು ಮುಂದೆ ನಡೆಯಗೊಡಲಾರೆವು’’. ಮೇಲಿನ ಉದ್ಗಾರಗಳಿಂದ ಸಂಪಾದಕ ಮಹಾಶಯರು ಅಸ್ಪಶ್ಯತೆಯನ್ನು ಕೇವಲ ಮುಸಲ್ಮಾನರಿಗೆ ಹೆದರಿ ಹೋಗಲಾಡಿಸುವ ಪ್ರಯತ್ನದಲ್ಲಿದ್ದಾರೆಯೇ ಹೊರತು ಅದೊಂದು ಅಧರ್ಮ ಅಥವಾ ಅನೀತಿಯೆಂದುಕೊಂಡು ಹೋಗಲಾಡಿಸುತ್ತಿಲ್ಲ! ಕೇವಲ ಮುಸಲ್ಮಾನರ ಹೆದರಿಕೆಯಿಂದಲೇ ಅಸ್ಪಶ್ಯತೆ ನಷ್ಟವಾಗಬೇಕಿದೆ ಅನ್ನುವುದು ಸನಾತನ ಧರ್ಮದವರೇ ಒಪ್ಪಿಕೊಳ್ಳುತ್ತಿರುವಾಗ ದಲಿತರಿಗೆ ನೀವು ಮುಸ್ಲಿಂ ಧರ್ಮವನ್ನು ಸ್ವೀಕರಿಸಿ ಎಂದು ಉಪದೇಶ ಮಾಡಿದರೆ ಡಾ.ಉದ್ಗಾವ್‌ಕರ್ ಅವರಿಗೆ ಯಾಕೆ ಸಿಟ್ಟು ಬರಬೇಕು ಅನ್ನುವುದು ನಮಗೆ ತಿಳಿಯುತ್ತಿಲ್ಲ.

ಈ ಡಾಕ್ಟರ್ ಮಹೋದಯರು ‘ರಣಗರ್ಜನೆ’ (ಪತ್ರಿಕೆ)ಯ ತಾ.6.6.27ರ ಸಂಚಿಕೆಯಲ್ಲಿ ‘‘ಅಸ್ಪಶ್ಯತೆ ನಿವಾರಣೆಗಾಗಿ ಡಾ. ಅಂಬೇಡ್ಕರ್‌ರ ಉಪಾಯ’’ ಅನ್ನುವ ಶೀರ್ಷಿಕೆಯಡಿ ಒಂದು ದೊಡ್ಡ ಲೇಖನವನ್ನು ಪ್ರಕಟಿಸಿದ್ದಾರೆ. ಈ ಸ್ತಂಭಲೇಖನದಲ್ಲವರು ‘ಬಹಿಷ್ಕೃತ ಭಾರತ’ದ ತಾ.20 ಮೇ ಸಂಚಿಕೆಯಲ್ಲಿ ಪ್ರಕಟವಾದ ‘ದಲಿತರ ಜವಾಬ್ದಾರಿ’ ಅನ್ನುವ ನನ್ನ ಅಗ್ರಲೇಖನದ ಮೇಲೆ ಸಿಟ್ಟು ಕಾರಿದ್ದಾರೆ. ಆ ಅಗ್ರಲೇಖನದಲ್ಲಿ ನಾವು ಬಳಸಿದ್ದ ‘ಲಗಾಮಿಲ್ಲದ ಭಾಷೆ’ ಹಾಗೂ ‘ಅವಿವೇಕಿ ವಿಚಾರ’ಗಳು ಅವರಿಗೆ ಆಗಿಬರದಿದ್ದ ಕಾರಣ ‘‘ಬುದ್ಧಿವಂತ ಮನುಷ್ಯನು ಅವಿವೇಕದ ದಾಸನಾಗಿ ತನ್ನ ಜವಾಬ್ದಾರಿಯನ್ನು ತಳ್ಳಿಬಿಡುವಂತಹ ಭಾಷೆಯಲ್ಲಿ ಮಾತನಾಡುವಾಗ ಅವನನ್ನು ಎಚ್ಚರಿಸಿ ಬುದ್ಧಿ ಹೇಳಿದರೆ ಕ್ರೋಧದಲ್ಲಿ, ದ್ವೇಷದಲ್ಲಿ ಮದಮತ್ತನಾದ ಅತ ಸರಿದಾರಿಗೆ ಬರುತ್ತಾನೆ.’’ ಅನ್ನುವಂತಹ ಭಾವನೆಯಿಂದ ಪ್ರೇರಿತರಾದ ಅವರು ನಮ್ಮ ಮುಖ್ಯ ಲೇಖನದ ಬಗ್ಗೆ ಬರೆಯಲು ಕಷ್ಟಪಟ್ಟಿದ್ದಾರೆ. ಅವರು ಪಟ್ಟ ಶ್ರಮಕ್ಕೆ ನಾವು ಕೃತಜ್ಞರಾಗಿದ್ದೇವೆ. ನಮಗೆ ಬುದ್ಧಿ ಹೇಳುವಷ್ಟು ಶಕ್ತಿ ಡಾ.ಉದ್ಗಾವ್‌ಕರ್ ಅವರಲ್ಲಿದೆಯೋ ಇಲ್ಲವೋ ಕಾಣೆವು, ಆದರೆ ನಾವು ಯಾರಿಂದಲೂ ಬದ್ಧಿ ಹೇಳಿಸಿಕೊಳ್ಳಲು ಸಿದ್ಧರು. ಔಷಧಿಯ ಪ್ರಮಾಣ ಹೆಚ್ಚಾದರೆ ವಿಷವಾಗುವ ಸಾಧ್ಯತೆಗಳಿರುತ್ತವೆ; ಹಾಗೆಯೇ ಬುದ್ಧಿ ಹೇಳುವ ಪ್ರಮಾಣ ಹೆಚ್ಚಾದರೆ ಅದರಲ್ಲಿ ಅರ್ಥ ಉಳಿಯುವುದಿಲ್ಲ. ಹಾಗೆ ನೋಡಿದರೆ ಡಾ.ಉದ್ಗಾವ್‌ಕರ್ ಅವರ ಬುದ್ಧಿ ಹೇಳುವಿಕೆಯಲ್ಲೂ ಏನೂ ಅರ್ಥವಿಲ್ಲ.

ನಾವು ಹೇಳಿರುವ ಎರಡು ಯೋಗಗಳಲ್ಲಿ ಪ್ರತೀಕಾರ ಯೋಗ ಡಾ.ಉದ್ಗಾವ್‌ಕರ್‌ರಿಗೆ ಒಪ್ಪಿಗೆಯಾಗಿದೆ ಅನ್ನುವುದು ನಮ್ಮ ಸುದೈವ. ಇಲ್ಲದಿದ್ದರೆ ಪ್ರತೀಕಾರ ಯೋಗದ ಪಾಠ ಹೇಳುವುದು ಕೂಡ ಪಾಪವೇ ಅಂದಿದ್ದರೆ ಇನ್ನೇನು ಮಾಡಲು ಸಾಧ್ಯವಿತ್ತು? ಬಹಿಷ್ಕಾರ ಯೋಗದಿಂದಲೇ ಡಾ.ಮಹೋದಯರ ತಲೆ ಸಿಡಿದಿದೆ. ನಿಜ ಹೇಳುವುದಾದರೆ ಹಾಗಾಗಬಾರದಿತ್ತು, ಉದ್ಗಾವ್‌ಕರ್ ಅವರೇ, ‘‘ಡಾಕ್ಟರ್ ಸಾಹೇಬರು (ಅಂಬೇಡ್ಕರರು) ಏಳು ಕೋಟಿ ದಲಿತ ಸಮಾಜ ತಮ್ಮ ಮಾತನ್ನು ಒಪ್ಪುತ್ತಾರೆ ಅನ್ನುವ ಆಸೆಯನ್ನಿಟ್ಟುಕೊಳ್ಳಬಾರದು’’ ಎಂದು ಬರೆಯುತ್ತಾರೆ. ಈ ಮಾತಿನ ಮೇಲೆ ಸ್ವತಃ ಉದ್ಗಾವ್‌ಕರ್ ಅವರಿಗೇ ನಂಬಿಕೆಯಿದ್ದರೆ ಹಾಗೂ ನಮ್ಮ ನಾಯಕರೇ ನಮ್ಮವರಲ್ಲ ಎಂದು ದಲಿತರ ಬಾಯಿಯಿಂದಲೇ ಹೇಳಿಸಿಕೊಳ್ಳುವ ಪ್ರಸಂಗ ಡಾ.ಅಂಬೇಡ್ಕರ್ ಅವರ ಮೇಲೆ ಬರುತ್ತದೆ ಅನ್ನುವ ಕನಸೇನಾದರೂ ಉದ್ಗಾವ್‌ಕರ್ ಅವರಿಗೆ ಬೀಳುತ್ತಿದ್ದರೂ ಡಾ.ಅಂಬೇಡ್ಕರ್ ಒಬ್ಬ ಹುಚ್ಚು ಸನ್ಯಾಸಿ ಅವನ ಮಾತಿಗೇನು ಬೆಲೆ ಕೊಡುವುದು ಎಂದು ಹೇಳಿ ಅವರು ಸುಮ್ಮನೆ ಕೂರಬಹುದಿತ್ತು. ಇರಲಿ, ನಾವು ಧರ್ಮಾಂತರ ಮಾಡಲು ಹೇಳಿದರೆ ಜನರು ‘ನಾಯಕ’ ಅನ್ನುವ ನಮ್ಮ ಪದವಿಯನ್ನು ಕಸಿದುಕೊಂಡಾರೆನ್ನುವ ಭಯ ತೋರಿಸಿ ನಮ್ಮನ್ನು ಸುಮ್ಮನಿರಿಸುವ ಪ್ರಯತ್ನವನ್ನೇನಾದರೂ ಉದ್ಗಾವ್‌ಕರ್ ಮಾಡುತ್ತಿದ್ದರೆ ಅವರು ನಮ್ಮನ್ನು ಅರ್ಥಮಾಡಿಕೊಂಡೇ ಇಲ್ಲ ಅನ್ನಬೇಕು. ಏಳು ಕೋಟಿ ದಲಿತರು ನಮ್ಮ ಮಾತನ್ನು ಕೇಳಿಯಾರು ಎಂದು ನಾವೆಂದೂ ತಿಳಿದಿಲ್ಲ. ಹಾಗೆಂದು ನಾವು ಮಾಡಬೇಕೆಂದಿರುವುದನ್ನು, ಹೇಳಬೇಕೆಂದಿರುವುವನ್ನು ಹೇಳದೆ ಮಾಡದೆ ಸುಮ್ಮನಿರೆವು! ನಾವು ನಮ್ಮನ್ನು ನಾಯಕರು ಎಂದು ಯಾವತ್ತೂ ತಿಳಿದುಕೊಂಡಿಲ್ಲ. ಒಂದು ಪಕ್ಷ ಜನ ಹಾಗೆ ಅಂದುಕೊಳ್ಳುತ್ತಿದ್ದರೆ ಅನುಯಾಯಿಗಳು ನಮ್ಮ ಹೆಜ್ಜೆಯನ್ನನುಸರಿಸುತ್ತಾರೆಯೇ ಎಂದು ಕಾಯುತ್ತ ಕುಳಿತುಕೊಳ್ಳುವ ಹೆದರುಪುಕ್ಕಲು ನಾಯಕರು ನಾವಲ್ಲ ಅನ್ನುವುದನ್ನು ಡಾ.ಉದ್ಗಾವ್‌ಕರ್ ನೆನಪಿನಲ್ಲಿಡಬೇಕು.

ಹಾಗೆಯೇ ನಮ್ಮಲ್ಲೂ ನಮ್ಮ ದಲಿತಬಂಧುಗಳಲ್ಲೂ ಮತಬೇಧಗಳಾಗಿ ನಮ್ಮ ನಾಯಕ ಪದವಿ ಹೋದರೆ ನಮಗೆ ಎಳ್ಳಷ್ಟೂ ಬೇಸರವಾಗಬಾರದು. ಏಕೆಂದರೆ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳಲು ಜನರಿಗಿಷ್ಟವಾದದ್ದನ್ನೇ ಹೇಳಬೇಕು ಅನ್ನುವಂತಹ ತೋರಿಕೆಯ ಧೋರಣೆ ನಮ್ಮದಲ್ಲ. ನಮಗೆ ಸರಿ ಅನಿಸಿದ್ದನ್ನೇ ಹೇಳಬೇಕು ಅನ್ನುವುದೇ ನಮ್ಮ ಪ್ರಾಮಾಣಿಕ ಮತ. ಇರಲಿ, ಬಹಿಷ್ಕಾರ ಯೋಗ ಅನ್ನುವುದು ಲೋ.ತಿಲಕರದು ಎಂದು ನಾವು ಹೇಳಿದ್ದಕ್ಕೆ ಡಾ. ಮಹೋದಯರಿಗಂತೂ ನಗು ತಡೆಯಲಾಗುತ್ತಿಲ್ಲ. ನಮಗೆ ಗೊತ್ತು, ನಮ್ಮ ಲೇಖನವನ್ನು ಅರ್ಥಮಾಡಿಕೊಳ್ಳುವ ತಾಕತ್ತು ಡಾ. ಮಹೋದಯರಿಗಿದ್ದಿದ್ದರೆ ನಗು ಬರುವುದಕ್ಕಿಂತ ಅವರಿಗೆ ಅಳು ಬರುತ್ತಿತ್ತು ಹಾಗೂ ‘‘ಲೋಕಮಾನ್ಯರೆ! ಇದೇನು ಮಾಡಿದಿರಿ? ರಾಜಕಾರಣದಲ್ಲಿ ಬ್ರಿಟಿಷ್ ಪ್ರಭುವಿನ ವಿರುದ್ಧ ನೀವು ಹೇಳಿಕೊಟ್ಟಿರುವ ಬುದ್ಧಿಯನ್ನು ದಲಿತರು ಸಮಾಜಕಾರಣದಲ್ಲಿ ಮೇಲ್ಜಾತಿಯವರ ಮೇಲೆ ತೋರಿಸುತ್ತಿದ್ದಾರೆ.’’ ಎಂದು ಬಹುಶಃ ಹೇಳುತ್ತಿದ್ದ್ದರೋ ಏನೋ. ಲೋಕಮಾನ್ಯರ ಶಿಷ್ಯರಲ್ಲಿ ಅಷ್ಟು ಬುದ್ಧಿಯಿಲ್ಲ ಅನ್ನುವುದು ಒಳ್ಳೆಯದೇ ಆಯಿತು. ಇದ್ದಿದ್ದರೆ ಅವರು ಲೋಕಮಾನ್ಯರಿಗೆ ಸರಿಯಾಗಿ ಬಯ್ಯುತ್ತಿದ್ದರು. ಹಾಗಾಗಿ ಡಾ.ಉದ್ಗಾವ್‌ಕರ್‌ರ ಲೇಖನದಲ್ಲಿರುವ ಚೇಷ್ಟೆಯ ವಿಷಯವನ್ನು ಪಕ್ಕಕ್ಕಿಟ್ಟರೂ ಬಹಿಷ್ಕಾರ ಯೋಗವನ್ನು ಹೇಳಿಕೊಡುವುದರಲ್ಲಿ ನಾವು ತಪ್ಪಿದ್ದೆಲ್ಲಿ ಅನ್ನುವುದನ್ನು ಡಾ.ಮಹೋದಯರೂ ಎಲ್ಲೂ ಬರೆದಿಲ್ಲ.

ದಲಿತ ಸಮಾಜಕ್ಕೆ ತಮ್ಮ ಧರ್ಮವನ್ನು ಬಿಟ್ಟುಬಿಡುವ ಉಪದೇಶ ಕೊಡುವುದು ‘ಆತ್ಮಾಘಾತುಕ’ವಾದಂತಹದ್ದು ಎಂದು ಡಾ.ಮಹೋದಯರು ಹೇಳುತ್ತಾರೆ. ಆದರೆ ಬರೀ ಮಾತಿನಿಂದೇನು ಪ್ರಯೋಜನ? ಹಿಂದೂ ಸಮಾಜದಲ್ಲಿದ್ದು ದಲಿತರಿಗೇನು ಸಿಗುವ ಸಾಧ್ಯತೆಗಳಿವೆ ಹಾಗೂ ಧರ್ಮಾಂತರಗೊಂಡರೆ ದಲಿತರು ಕಳೆದುಕೊಳ್ಳುವುದೇನನ್ನೂ? ಅನ್ನುವುದರ ಬಗ್ಗೆ ಅವರು ಚರ್ಚಿಸಿದ್ದರೆ ತಮ್ಮ ತಪ್ಪು ನಮಗೆ ಅರ್ಥವಾಗುತ್ತಿತ್ತು. ಆದರೆ ಡಾ. ಮಹೋದಯರು ತಮ್ಮ ಹಿಂದೂ ಮಹಾಸಭೆಯ ವತಿಯಿಂದ ವಿರೋಧಿಸಿದ್ದರೆ ಇವತ್ತು ಅದನ್ನಾದರೂ ಹೇಳಬಹುದಿತ್ತು. ಆದರೆ ಅಷ್ಟೂ ಮಾಡುವ ಧೈರ್ಯವಾಗಲಿ ಬುದ್ಧಿಯಾಗಲಿ ಡಾ.ಉದ್ಗಾವ್‌ಕರ್ ಅವರು ತೋರಿಸಲಿಲ್ಲ. ಹಾಗಾದರೆ ಪರಧರ್ಮಕ್ಕೆ ಹೋದರೆ ಮೋಸ ಹೋದೀರಿ, ಎಂದು ಯಾವ ಬಾಯಿಯಿಂದ ಹೇಳುತ್ತೀರಿ? ಅನ್ನುವುದು ನಮಗೆ ಗೊತ್ತಾಗುತ್ತಿಲ್ಲ. ಬಹುಶಃ ಹಿಂದೂ ಸಮಾಜದ ಕಾರ್ಯದರ್ಶಿಯಾಗಿರುವುದೇ ಅವರ ಅಸ್ಪಶ್ಯತೆ ನಿವಾರಣೆಯ ಸಾಕ್ಷಿಯಾಗಿದ್ದಿರಬಹುದು ಯಾರಿಗೆ ಗೊತ್ತು? ಅಥವಾ, ಹಿಂದೂ ಧರ್ಮದ ಮಹಾನ್ ತತ್ವಗಳೇ ನಮ್ಮ ನಿಜವಾದ ಸಂಪತ್ತು ಅಂದುಕೊಂಡು ದಲಿತರು ಯಾವತ್ತೂ ಹಿಂದೂ ಧರ್ಮದ ಮೇಲೇ ತಮ್ಮ ಪ್ರಾಣವನ್ನಿಟ್ಟುಕೊಳ್ಳಬೇಕು ಎಂದು ಅವರ ಅನಿಸಿಕೆಯಾಗಿರಬೇಕು. ಇಂತಹ ಶುಷ್ಕ ಮಾತುಗಳಿಂದ ಅಥವಾ ಕೇವಲ ಶಬ್ದಗಳ ಕೂಟನೀತಿಯಿಂದ ನಮ್ಮನ್ನು ಒಪ್ಪಿಸಲಾರಿರಿ. ಡಾ. ಉದ್ಗಾವ್‌ಕರ್ ಹಾಗೂ ಅವರಂತೆಯೇ ಧರ್ಮಾಂತರದ ಬಗ್ಗೆ ಸಿಟ್ಟಿರುವವರಿಗೆ ನಾವು ಹೇಳುವುದಿಷ್ಟೆ, ಅಪ್ಪನನ್ನು ತೋರಿಸಿ ಇಲ್ಲವೆ ಶ್ರಾದ್ಧ ಮಾಡಿ ಎಂದು ಹೇಳುವ ಭಿಕ್ಷುಕನಂತೆ ಆತ್ಮೀಯತೆಗೆ ಸಾಕ್ಷಿಕೊಡಿ ಇಲ್ಲವಾದರೆ ಬಿಟ್ಟುಬಿಡಿ. ನಿಮ್ಮ ಹಳಸಲು ಮತುಕತೆಗಳು ನಮಗೆ ಬೇಡ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News