ಬಿಜೆಪಿಯ ಮಿತ್ರಪಕ್ಷಕ್ಕೆ ಸೇರಲು ಐವರು ಕಾಂಗ್ರೆಸಿಗರು ಸೇರಿದಂತೆ ಎಂಟು ಶಾಸಕರ ರಾಜೀನಾಮೆ

Update: 2017-12-29 13:34 GMT

ಶಿಲ್ಲಾಂಗ್,ಡಿ.29: ಬಿಜೆಪಿಯ ಮಿತ್ರಪಕ್ಷವಾಗಿರುವ ಎನ್‌ಪಿಪಿಗೆ ಸೇರ್ಪಡೆಗೊಳ್ಳಲು ಐವರು ಕಾಂಗ್ರೆಸಿಗರು ಸೇರಿದಂತೆ ಮೇಘಾಲಯದ ಎಂಟು ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ನಡೆದಿರುವ ಈ ಬೆಳವಣಿಗೆ ರಾಜ್ಯದಲ್ಲಿಯ ಮುಕುಲ್ ಸಂಗ್ಮಾ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಹಿನ್ನಡೆಯನ್ನುಂಟು ಮಾಡಿದೆ.

60 ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಬಲ ಈಗ ಇನ್ನಷ್ಟು ಕುಸಿದು 24ಕ್ಕೆ ತಲುಪಿದೆ. ಕಳೆದ ತಿಂಗಳು ಕಾಂಗ್ರೆಸ್ ಶಾಸಕ ಪಿ.ಎನ್.ಸಿಯೆಮ್ ಅವರು ರಾಜೀನಾಮೆ ನಿಡಿದ್ದರು. ಆದರೆ ಸಂಗ್ಮಾ ಸರಕಾರವು ಪಕ್ಷೇತರರು ಮತ್ತು ಮಿತ್ರಪಕ್ಷಗಳ ಬೆಂಬಲ ಬೊಂದಿರುವದರಿಂದ ಅದಕ್ಕೆ ತಕ್ಷಣಕ್ಕೆ ಯಾವುದೇ ಬೆದರಿಕೆಯಿಲ್ಲ.

ಶುಕ್ರವಾರ ಸ್ಪೀಕರ್ ಅಬು ತಾಹಿರ್ ಮಂಡಲ್ ಅವರಿಗೆ ರಾಜೀನಾಮೆ ಸಲ್ಲಿಸಿರುವ ಶಾಸಕರಲ್ಲಿ ಯುಡಿಪಿಯ ಓರ್ವ ಮತ್ತು ಇಬ್ಬರು ಪಕ್ಷೇತರರು ಸೇರಿದ್ದಾರೆ. ಈ ಎಲ್ಲ ಎಂಟೂ ಶಾಸಕರು ಜ.4ರಂದು ಇಲ್ಲಿ ನಡೆಯಲಿರುವ ಸಾರ್ವಜನಿಕ ರ್ಯಾಲಿಯಲ್ಲಿ ಎನ್‌ಪಿಪಿಯನ್ನು ಸೇರಲಿದ್ದಾರೆ.

ಕೇಂದ್ರದಲ್ಲಿ ಎನ್‌ಡಿಎದ ಅಂಗಪಕ್ಷವಾಗಿರುವ ಎನ್‌ಪಿಪಿ ಮಣಿಪುರದಲ್ಲಿಯ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರದ ಪಾಲುದಾರನಾಗಿದೆ. ಅದು ಬಿಜೆಪಿ ನೇತೃತ್ವದ ಈಶಾನ್ಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಇಡಿಎ)ದ ಭಾಗವೂ ಆಗಿದೆ.

ಮೇಘಾಲಯದಲ್ಲಿ ಬಿಜೆಪಿ ಮತ್ತು ಎನ್‌ಡಿಎ ಅಥವಾ ಇತರ ಯಾವುದೇ ಪ್ರಾದೇಶಿಕ ಪಕ್ಷ ಈವರೆಗೆ ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News