ಗೌರಿ ಲಂಕೇಶ್, ಅಫ್ರಝುಲ್ ಖಾನ್ ಸ್ಥಿತಿ ನನಗೆ ಬೇಡ

Update: 2017-12-29 15:31 GMT

ಹೊಸದಿಲ್ಲಿ, ಡಿ.29: ಹಿಂದುತ್ವ ಮತ್ತು ಅದರ ಪ್ರತಿಪಾದಕರ ಬಗ್ಗೆ ವಿಡಂಬನಾತ್ಮಕ ಬರಹ ಪ್ರಕಟಿಸುವ ವಿವಾದಾಸ್ಪದ ಫೇಸ್‌ಬುಕ್ ಪುಟ ‘ಹ್ಯೂಮನ್ಸ್ ಆಫ್ ಹಿಂದುತ್ವ’ವನ್ನು ಗುರುವಾರ ಸಂಜೆಯಿಂದ ತೆಗೆದುಹಾಕಿರುವುದಾಗಿ ತಿಳಿಸಲಾಗಿದೆ.

ಬ್ರಂಡನ್ ಸ್ಟಾಂಟನ್ ಅವರ ‘ಹ್ಯೂಮನ್ಸ್ ಆಫ್ ನ್ಯೂಯಾರ್ಕ್’ ಫೇಸ್‌ಬುಕ್ ಪುಟದಿಂದ ಪ್ರೇರಣೆ ಪಡೆದಿರುವ ‘ಹ್ಯೂಮನ್ಸ್ ಆಫ್ ಹಿಂದುತ್ವ’ ಬಲಪಂಥೀಯ ಮೂಲಭೂತವಾದ ಹಾಗೂ ಅದರ ಪ್ರತಿಪಾದಕರು, ದೈನಂದಿನ ಘಟನೆಗಳು, ಜಾತೀವಾದ, ನೈತಿಕ ಪೊಲೀಸ್‌ಗಿರಿ, ಗೋರಕ್ಷಕರ ದಾಳಿ ಮುಂತಾದ ವಿಷಯಗಳ ಕುರಿತು ವಿಡಂಬನಾತ್ಮಕ ಬರಹಗಳನ್ನು ನಿರಂತರವಾಗಿ ಪ್ರಕಟಿಸುತ್ತಿತ್ತು. ಆದರೆ ಇದೀಗ ಕೊಲೆ ಬೆದರಿಕೆ ಬಂದಿರುವ ಕಾರಣ ಫೇಸ್‌ಬುಕ್ ಪುಟವನ್ನು ತೆಗೆದುಹಾಕಲು ನಿರ್ಧರಿಸಿರುವುದಾಗಿ ಎಡ್ಮಿನ್‌ಸ್ಟ್ರೇಟರ್‌ನ ವೆಬ್‌ಸೈಟ್‌ನಲ್ಲಿ ಬರೆಯಲಾಗಿರುವ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

 ಸ್ವ ಸಮ್ಮತಿಯಿಂದ ವೆಬ್‌ಸೈಟ್ ಪುಟದಿಂದ ಹೊರಬರುತ್ತಿದ್ದೇನೆ. ತನ್ನ ಬರಹಗಳಿಗೆ ನಿಷೇಧ ವಿಧಿಸಿಲ್ಲ. ಆದರೆ ತನಗೆ ಎದುರಾಗಿರುವ ಜೀವಬೆದರಿಕೆಯನ್ನು ಲಘುವಾಗಿ ಪರಿಗಣಿಸಲು ತಯಾರಿಲ್ಲ. ಬಿಜೆಪಿ ಆಡಳಿತದ ರಾಜ್ಯದಲ್ಲಿ ವಾಸಿಸುವ ತಾನು ಮಧ್ಯಮವರ್ಗಕ್ಕೆ ಸೇರಿದವನಾಗಿದ್ದು ತನಗೆ ಯಾವುದೇ ರಾಜಕೀಯ ಅಥವಾ ಪೊಲೀಸ್ ಪ್ರಭಾವ ಬಳಸುವ ಸಾಮರ್ಥ್ಯವಿಲ್ಲ. ಗೌರಿ ಲಂಕೇಶ್ ಅಥವಾ ಅಫ್ರಝುಲ್ ಖಾನ್‌ರಂತೆ ಹತ್ಯೆಯಾಗಲು ತನಗೆ ಇಚ್ಛೆಯಿಲ್ಲ. ಕುಟುಂಬವರ್ಗದವರ ಸುರಕ್ಷತೆಯ ಬಗ್ಗೆ ತನಗೆ ಆತಂಕವಿದೆ ಎಂದು ಅವರು ತಿಳಿಸಿದ್ದಾರೆ.

ಇದು ತಮಗೆ ದೊರೆತ ಗೆಲುವೆಂದು ಬೆದರಿಕೆ ಒಡ್ಡಿದವರು ಪರಿಗಣಿಸಿ ತಮ್ಮ ಗೊಡವೆಗೆ ಇನ್ನೂ ಬರುವುದಿಲ್ಲ ಎಂದು ಆಶಿಸುವುದಾಗಿ ಹೇಳಿರುವ ಅವರು ತಿಳಿಸಿದ್ದು, ಹ್ಯೂಮನ್ಸ್ ಆಫ್ ಹಿಂದುತ್ವ ಪುಟವನ್ನು ಸಮಾಪ್ತಿಗೊಳಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಈ ಯುದ್ದದಲ್ಲಿ ಜಯಿಸಿದ ಹಿಂದುತ್ವಕ್ಕೆ ಹಾಗೂ ಕಳೆದ ಎಂಟು ತಿಂಗಳಿನಿಂದಲೂ ತನ್ನ ಬರಹಗಳನ್ನು ಗಮನಿಸಿದವರಿಗೆ ಅಭಿನಂದನೆಗಳು ಎಂದವರು ಬರೆದಿದ್ದಾರೆ.

ಹಿಂದುತ್ವ(ಹಿಂದೂಧರ್ಮದ ಬಗ್ಗೆ ಅಲ್ಲ)ದ ಬಗ್ಗೆ ಮತ್ತು ಅದಕ್ಕೆ ಪ್ರೋತ್ಸಾಹ ನೀಡುತ್ತಿರುವ ರಾಜಕಾರಣಿಗಳ ಬಗ್ಗೆ ವಿಡಂಬನಾತ್ಮಕ ಬರಹಗಳನ್ನು ಒಳಗೊಂಡಿರುವ ಫೇಸ್‌ಬುಕ್ ಪುಟವನ್ನು ನಿರ್ವಹಿಸುತ್ತಿರುವ ಏಕಮಾತ್ರ ಕಾರಣಕ್ಕೆ ಎಣಿಕೆಗೆ ಮೀರಿದಷ್ಟು ಬೆದರಿಕೆ ಕರೆಗಳನ್ನು ಎದುರಿಸಿದ್ದೇನೆ. ಹಲವಾರು ಅಪರಿಚಿತ ವ್ಯಕ್ತಿಗಳು ನನ್ನ ಕುಟುಂಬ ಸದಸ್ಯರನ್ನು ನಿಂದಿಸಿದ್ದಾರೆ. ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಎಳೆಯುವುದಾಗಿ ಹಲವರು ಬೆದರಿಸಿದ್ದಾರೆ ಎಂದು ಕಳೆದ ಅಕ್ಟೋಬರ್‌ನಲ್ಲಿ ‘ದಿ ವೈರ್’ ವೆಬ್‌ಸೈಟ್‌ಗೆ ಬರೆದಿರುವ ಲೇಖನದಲ್ಲಿ ಅವರು ತಿಳಿಸಿದ್ದರು.

   ದ್ವೇಷಪೂರಿತ ಬರಹಗಳಿರುವ ಕಾರಣ ಈ ಫೇಸ್‌ಬುಕ್ ಪುಟವನ್ನು ಫೇಸ್‌ಬುಕ್ ಸಂಸ್ಥೆ ತೆಗೆದುಹಾಕಿದೆ ಎಂದು ಹಲವರು ಟೀಕಿಸಿದ್ದಾರೆ. ಆದರೆ ಇದನ್ನು ಎಡ್ಮಿನ್ ನಿರಾಕರಿಸಿದ್ದಾರೆ. ಇದು ತನ್ನ ಸ್ವಂತ ನಿರ್ಧಾರ ಎಂದು ಸಾಬೀತುಪಡಿಸಲು , ‘ಸ್ಕ್ರೀನ್‌ಶಾಟ್’ ಗಳನ್ನು ಒದಗಿಸಲು ಸಿದ್ದನಿದ್ದೇನೆ ಎಂದವರು ತಿಳಿಸಿದ್ದಾರೆ.

  ಕೆಲವು ಪತ್ರಕರ್ತರು ತನ್ನನ್ನು ಹೇಡಿ ಎಂದು ಟೀಕಿಸಬಹುದು. ಆದರೆ ಪತ್ರಕರ್ತೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದಾಗ, ವ್ಯಕ್ತಿಯನ್ನು ಜೀವಂತ ದಹಿಸಿದಾಗ ಅಥವಾ ವ್ಯಕ್ತಿಯನ್ನು ಗುಂಪು ವಿನಾಕಾರಣ ಥಳಿಸುವ ವೀಡಿಯೊ ದೃಶ್ಯಗಳನ್ನು ಕಂಡಾಗ , ತಮ್ಮ ಕುಟುಂಬದ ರಕ್ಷಣೆಗಾಗಿ ಓರ್ವ ವ್ಯಕ್ತಿ ‘ಹೇಡಿತನದ ನಿರ್ಧಾರ’ ಕೈಗೊಳ್ಳಲೇ ಬೇಕಾಗುತ್ತದೆ. ಇವತ್ತು ತನಗಾದ ಅನುಭವ ನಾಳೆ ನಿಮಗೂ ಆಗಬಹುದು ಎಂದು ಅವರು ಹೇಳಿದ್ದಾರೆ. ತನಗೆ ಬೆದರಿಕೆ ಒಡ್ಡಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ತಾನು ಬಯಸುವುದಿಲ್ಲ. ಯಾಕೆಂದರೆ ಹೀಗೆ ಮಾಡಿದರೆ ತಾನು ಮತ್ತಷ್ಟು ಅಪಾಯಕ್ಕೆ ಸಿಲುಕುತ್ತೇನೆ ಎಂಬ ಅರಿವಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News