ಬಹಿರಂಗ ಸಭೆಯಲ್ಲಿ ಭಾಷಣದ ಬಳಿಕ ಅಸ್ವಸ್ಥಗೊಂಡ ಸಚಿವ ಗಡ್ಕರಿ
ಮಜುಲಿ(ಅಸ್ಸಾಂ),ಡಿ.29: ಶುಕ್ರವಾರ ಅಪ್ಪರ್ ಅಸ್ಸಾಮಿನ ಮಜುಲಿ ದ್ವೀಪದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ನೌಕೋದ್ಯಮ ಸಚಿವ ನಿತಿನ್ ಗಡ್ಕರಿ ಅವರು ಅಸ್ವಸ್ಥಗೊಂಡಿದ್ದು ಆತಂಕವನ್ನು ಸೃಷ್ಟಿಸಿತ್ತು.
ಬ್ರಹ್ಮಪುತ್ರಾ ನದಿಯಲ್ಲಿ ಸರಕು ಸಾಗಣೆಗೆ ಚಾಲನೆ ನೀಡಲು ಇಲ್ಲಿಗೆ ಆಗಮಿಸಿದ್ದ ಗಡ್ಕರಿ ಒಂದು ಗಂಟೆ ಕಾಲ ಮಾತನಾಡಿದ ಬಳಿಕ ಕುರ್ಚಿಯಲ್ಲಿ ಅಸೀನರಾಗಿದ್ದ ವೇಳೆ ಅಸ್ವಸ್ಥತೆ ಕಾಡಿ ತಲೆಯನ್ನು ಹಿಂದಕ್ಕೆ ಒರಗಿಸಿದ್ದರು. ಸ್ಥಳದಲ್ಲಿದ್ದ ವೈದ್ಯರ ತಂಡ ತಕ್ಷಣ ಅವರ ಬಳಿ ಧಾವಿಸಿ, ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವನ್ನು ಪರಿಶೀಲಿಸಿ, ಬಾಳೇಹಣ್ಣೊಂದನ್ನು ತಿನ್ನಿಸಿದ್ದರು. ಈ ವೇಳೆ ಸಚಿವರಿಗೆ ಹೆಚ್ಚಿನ ತೊಂದರೆಯಾಗದಂತೆ ಸ್ಪೀಕರ್‌ಗಳ ಶಬ್ದವನ್ನು ತಗ್ಗಿಸಲಾಗಿತ್ತು ಮತ್ತು ಅವರ ಬಳಿ ಪೆಡೆಸ್ಟಲ್ ಫ್ಯಾನ್‌ಗಳನ್ನು ಇರಿಸಲಾಗಿತ್ತು.
ಸಚಿವರ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ತಾತ್ಕಾಲಿಕ ಏರಿಕೆಯಾಗಿತ್ತು ಮತ್ತು ಈಗ ಅವರು ಚೇತರಿಸಿಕೊಂಡಿದ್ದಾರೆ ಎಂದು ಜಿಲ್ಲಾ ವ್ಯೆದ್ಯಾಧಿಕಾರಿಗಳು ತಿಳಿಸಿದರು. ಕಾರ್ಯಕ್ರಮದ ಬಳಿಕ ಸಚಿವರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕುರಿತ ಸಭೆಯಲ್ಲಿ ಭಾಗವಹಿಸಲು ಕಾಝಿರಂಗಾಕ್ಕೆ ತೆರಳಿದರು.