ದಕ್ಷಿಣ ಆಫ್ರಿಕ ಟೆಸ್ಟ್ ತಂಡ ಪ್ರಕಟ: ಪ್ಲೆಸಿಸ್, ಸ್ಟೇಯ್ನ್ ವಾಪಸ್

Update: 2017-12-29 18:16 GMT

ಕೇಪ್‌ಟೌನ್, ಡಿ.29: ನಾಯಕ ಎಫ್ ಡು ಪ್ಲೆಸಿಸ್ ಹಾಗೂ ವೇಗದ ಬೌಲರ್ ಡೇಲ್ ಸ್ಟೇಯ್ನೆ ಭಾರತ ವಿರುದ್ಧ ಜ.5 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡಕ್ಕೆ ವಾಪಸಾಗಿದ್ದಾರೆ. ಅನಾರೋಗ್ಯದ ಕಾರಣ ಡು ಪ್ಲೆಸಿಸ್ ಹಾಗೂ ಸ್ಟೇಯ್ನೆ ಝಿಂಬಾಬ್ವೆ ವಿರುದ್ಧ ನಡೆದ ಚತುರ್ದಿನ ಟೆಸ್ಟ್ ಪಂದ್ಯದಲ್ಲಿ ಆಡಿರಲಿಲ್ಲ.

ಎಬಿ ಡಿವಿಲಿಯರ್ಸ್ ಸುಮಾರು ಎರಡು ವರ್ಷಗಳ ಬಳಿಕ ದಕ್ಷಿಣ ಆಫ್ರಿಕ ತಂಡಕ್ಕೆ ವಾಪಸಾಗಿದ್ದು ಪ್ಲೆಸಿಸ್ ಅನುಪಸ್ಥಿತಿಯಲ್ಲಿ ಝಿಂಬಾಬ್ವೆ ವಿರುದ್ಧ ತಂಡವನ್ನು ನಾಯಕನಾಗಿ ಮುನ್ನಡೆಸಿ ಭರ್ಜರಿ ಗೆಲುವು ತಂದುಕೊಟ್ಟಿದ್ದ್ದರು.

ವೇಗದ ಬೌಲರ್ ಕ್ರಿಸ್ ಮೊರಿಸ್ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೊರಿಸ್ ಜುಲೈನಿಂದ ದಕ್ಷಿಣ ಆಫ್ರಿಕ ತಂಡದಲ್ಲಿ ಆಡಿರಲಿಲ್ಲ. ಇಂಗ್ಲೆಂಡ್ ಪ್ರವಾಸದ ವೇಳೆ ಅವರಿಗೆ ಬೆನ್ನುನೋವು ಕಾಣಿಸಿಕೊಂಡಿತ್ತು.

  ದಕ್ಷಿಣ ಆಫ್ರಿಕದ ವೇಗದ ಬೌಲಿಂಗ್ ವಿಭಾಗದಲ್ಲಿ ಅಂತಿಮ-11ರ ಬಳಗದಲ್ಲಿ ಸ್ಥಾನ ಪಡೆಯಲು ರಬಾಡ ಹಾಗೂ ಫಿಲ್ಯಾಂಡರ್ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಸ್ಟೇಯ್ನಿ ಭುಜನೋವಿನಿಂದ ಚೇತರಿಸಿಕೊಂಡು ಸುಮಾರು ಒಂದು ವರ್ಷದ ಬಳಿಕ ತಂಡಕ್ಕೆ ವಾಪಸಾಗುತ್ತಿದ್ದಾರೆ. ಝಿಂಬಾಬ್ವೆ ವಿರುದ್ಧ ಚತುರ್ದಿನ ಟೆಸ್ಟ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದಿರುವ ಮೊರ್ಕೆಲ್ ಆಯ್ಕೆಗಾರರಿಗೆ ತಲೆನೋವು ತಂದಿದ್ದಾರೆ.

ಝಿಂಬಾಬ್ವೆ ವಿರುದ್ಧ ಪಂದ್ಯದ ವೇಳೆ ಗಾಯದ ಸಮಸ್ಯೆಗೆ ಒಳಗಾಗಿರುವ ಕ್ವಿಂಟನ್ ಡಿಕಾಕ್ ತಂಡಕ್ಕೆ ಆಯ್ಕೆಯಾಗಿರುವ ಏಕೈಕ ವಿಕೆಟ್ ಕೀಪರ್.

ಕೇಶವ್ ಮಹಾರಾಜ್ ತಂಡದಲ್ಲಿರುವ ಏಕೈಕ ಸ್ಪೆಷಲಿಸ್ಟ್ ಸ್ಪಿನ್ನರ್. ಕೇಶವ್ ಝಿಂಬಾಬ್ವೆ ವಿರುದ್ಧ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿದ್ದರು.

ಡಿವಿಲಿಯರ್ಸ್ 5 ದಿನಗಳ ಟೆಸ್ಟ್ ಪಂದ್ಯಕ್ಕೆ ಮತ್ತೆ ವಾಪಸಾಗುತ್ತಿದ್ದು, ಝಿಂಬಾಬ್ವೆ ವಿರುದ್ಧ 65 ಎಸೆತಗಳಲ್ಲಿ 53 ರನ್ ಗಳಿಸಿದ್ದಾರೆ. ಭಾರತ ಈತನಕ ದಕ್ಷಿಣ ಆಫ್ರಿಕ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿಲ್ಲ. ಟೀಮ್ ಇಂಡಿಯಾ ಗುರುವಾರ ರಾತ್ರಿ ದಕ್ಷಿಣ ಆಫ್ರಿಕ ತಲುಪಿದೆ. 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲಪಂದ್ಯ ಜ.5 ರಿಂದ ಆರಂಭವಾಗಲಿದೆ.ಉಳಿದೆರಡು ಪಂದ್ಯಗಳು ಸೆಂಚೂರಿಯನ್(ಜ.13-17) ಹಾಗೂ ಜೋಹಾನ್ಸ್‌ಬರ್ಗ್ ನಲ್ಲಿ (ಜ.24-28)ನಡೆಯಲಿದೆ.

►ದಕ್ಷಿಣ ಆಫ್ರಿಕ ಟೆಸ್ಟ್ ತಂಡ: ಎಫ್‌ಡು ಪ್ಲೆಸಿಸ್(ನಾಯಕ), ಹಾಶಿಮ್ ಅಮ್ಲ, ಟೆಂಬಾ ಬವುಮಾ, ಕ್ವಿಂಟನ್ ಡಿಕಾಕ್, ಡಿ ಬ್ರೂನ್, ಎಬಿ ಡಿವಿಲಿಯರ್ಸ್, ಡಿಯನ್ ಎಲ್ಗರ್, ಕೇಶವ್ ಮಹಾರಾಜ್, ಏಡೆನ್ ಮಾರ್ಕ್ರೂಮ್, ಮೊರ್ನೆ ಮೊರ್ಕೆಲ್, ಕ್ರಿಸ್ ಮೊರಿಸ್, ಫೆಲುಕ್‌ವಾಯೊ, ವೆರ್ನಾನ್ ಫಿಲ್ಯಾಂಡರ್, ಕಾಗಿಸೊ ರಬಾಡ, ಡೇಲ್ ಸ್ಟೇಯ್ನಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News