‘ಪದ್ಮಾವತಿ’ ಚಿತ್ರವನ್ನು ‘ಪದ್ಮಾವತ್’ ಎಂದು ಬದಲಿಸಲು ಸೆನ್ಸಾರ್ ಮಂಡಳಿ ಸಲಹೆ
ಹೊಸದಿಲ್ಲಿ, ಡಿ. 30: ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತಿ ಚಲನಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಲು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ನಿರ್ಧರಿಸಿದೆ ಹಾಗೂ ಹೆಸರನ್ನು ಪದ್ಮಾವತ್ ಎಂದು ಬದಲಾಯಿಸುವಂತೆ ನಿರ್ದೇಶಕರಿಗೆ ಸಲಹೆ ನೀಡಿದೆ.
ಮಂಡಳಿ ತನ್ನ ಪರಿಶೀಲನಾ ಸಮಿತಿ ಸಭೆಯನ್ನು ಡಿಸೆಂಬರ್ 28ರಂದು ನಡೆಸಿತು ಹಾಗೂ ಕೆಲವು ಬದಲಾವಣೆ ಹಾಗೂ ಮಾರ್ಪಾಡಿನ ಸಲಹೆಯೊಂದಿಗೆ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಲು ನಿರ್ಧರಿಸಲಾಯಿತು ಎಂದು ಸಿಬಿಎಫ್‌ಸಿಯ ಪತ್ರಿಕಾ ಪ್ರಕಟನೆ ತಿಳಿಸಿದೆ.
16ನೇ ಶತಮಾನದ ಮಲಿಕ್ ಮುಹಮ್ಮದ್ ಜಯಸಿಯ ಮಹಾಕಾವ್ಯ ಪದ್ಮಾವತ್ ಆಧಾರದಲ್ಲಿ, ದೀಪಿಕಾ ಪಡುಕೋಣೆ, ಶಹೀದ್ ಕಪೂರ್, ರಣವೀರ್ ಸಿಂಗ್ ಹಾಗೂ ಇತರರು ತಾರಾಗಣದಲ್ಲಿ 150 ಕೋ. ರೂ. ವೆಚ್ಚದಲ್ಲಿ ಪದ್ಮಾವತಿ ಚಿತ್ರ ನಿರ್ಮಿಸಲಾಗಿದೆ ಎಂದು ಸಂಸದೀಯ ಸಮಿತಿ ಮುಂದೆ ಹಾಜರಾಗಿದ್ದ ಬನ್ಸಾಲಿ ಹೇಳಿದ್ದರು. ಪಾತ್ರಗಳ ಮೇಲಿನ ಹಕ್ಕು ನಿರಾಕರಣೆಯಲ್ಲಿ ಮಾರ್ಪಾಡು ಮಾಡುವಂತೆ, ಸತಿಪದ್ಧತಿಯನ್ನು ವೈಭವೀಕರಿಸದಂತೆ ಹಾಗೂ ‘ಘೂಮರ್’ ಹಾಡಿನಲ್ಲಿ ಪಾತ್ರಕ್ಕೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಮಾಡುವಂತೆ ಸೆನ್ಸಾರ್ ಮಂಡಳಿ ಸಲಹೆ ನೀಡಿದೆ.
ಈ ಸಭೆ ಸಿಬಿಐಫ್‌ಸಿ ಅಧ್ಯಕ್ಷ ಪ್ರಸೂನ್ ಜೋಶಿ ಉಪಸ್ಥಿತಿಯಲ್ಲಿ ನಡೆಯಿತು ಹಾಗೂ ಇತರ ಸೆನ್ಸಾರ್ ಮಂಡಳಿ ಅಧಿಕಾರಿಗಳೊಂದಿಗೆ ಎಂದಿನ ಪರಿಶೀಲನಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.
ಚಿತ್ರನಿರ್ಮಾಣಕಾರರು ಹಾಗೂ ಸಮಾಜವನ್ನು ಗಮನದಲ್ಲಿರಿಸಿಕೊಂಡು ಸಮತೋಲನದಲ್ಲಿ ಈ ಚಲನಚಿತ್ರವನ್ನು ಚಿತ್ರೀಕರಿಸಲಾಗಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.