ಹಫೀಝ್ ಸಯೀದ್ ಜೊತೆ ವೇದಿಕೆ ಹಂಚಿಕೆ: ರಾಯಭಾರಿಯನ್ನು ವಾಪಸ್ ಕರೆಸಿದ ಫೆಲೆಸ್ತೀನ್

Update: 2017-12-30 14:40 GMT

ಹೊಸದಿಲ್ಲಿ, ಡಿ.30: 26/11ರ ಮುಂಬೈ ದಾಳಿ ರೂವಾರಿ ಹಫೀಝ್ ಸಯೀದ್ ಜೊತೆ ಫೆಲೆಸ್ತೀನ್ ರಾಯಭಾರಿ ವೇದಿಕೆ ಹಂಚಿರುವುದರ ವಿರುದ್ಧ ಭಾರತ ಖಾರವಾಗಿ ಪ್ರತಿಕ್ರಿಯಿಸಿರುವ ಹಿನ್ನೆಲೆಯಲ್ಲಿ ಫೆಲೆಸ್ತೀನ್ ಪಾಕಿಸ್ತಾನದಲ್ಲಿರುವ ತನ್ನ ದೇಶದ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿದೆ. ಭಾರತದ ವಿರುದ್ಧ ಭಯೋತ್ಪಾದಕ ಕೃತ್ಯದ ರೂವಾರಿಯಾಗಿರುವ ವ್ಯಕ್ತಿಯ ಜೊತೆ ಫೆಲೆಸ್ತೀನ್ ರಾಯಭಾರಿ ವೇದಿಕೆ ಹಂಚಿಕೊಂಡಿರುವುದು ಸ್ವೀಕಾರಾರ್ಹವಲ್ಲ ಎಂದು ಭಾರತ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಫೆಲೆಸ್ತೀನ್ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

ಇದಕ್ಕೂ ಮೊದಲು ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದ ಫೆಲೆಸ್ತೀನ್ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭಾರತಕ್ಕೆ ಭರವಸೆ ನೀಡಿತ್ತು. ಅದರಂತೆ ಪಾಕಿಸ್ತಾನದಲ್ಲಿರುವ ಫೆಲೆಸ್ತೀನ್ ರಾಯಭಾರಿ ವಾಲಿದ್ ಅಬು ಅಲಿಯನ್ನು ಅಲ್ಲಿನ ಸರಕಾರ ವಾಪಸ್ ಕರೆಸಿಕೊಂಡಿದೆ.

ಶುಕ್ರವಾರದಂದು ಹಫೀಝ್ ಸಯೀದ್ ತನ್ನ ನಾಯಕತ್ವದ ದಿಫಾ-ಎ-ಪಾಕಿಸ್ತಾನ್ ಮಂಡಳಿಯ ರ್ಯಾಲಿ ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ ವಾಲಿದ್ ಅಬು ಅಲಿ ಭಾಗವಹಿಸಿದ್ದರು. ದಿಫಾ-ಎ-ಪಾಕಿಸ್ತಾನ್ 40 ರಾಜಕೀಯ ಮತ್ತು ಧಾರ್ಮಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ರಚಿಸಲ್ಪಟ್ಟ ಪಕ್ಷವಾಗಿದೆ. ಶುಕ್ರವಾರದ ಸಭೆಯನ್ನು ಇಸ್ರೇಲ್‌ನ ರಾಜಧಾನಿಯನ್ನು ಜೆರುಸಲೇಮ್‌ಗೆ ಸ್ಥಳಾಂತರಿಸುವುದರ ವಿರುದ್ಧ ಇಸ್ಲಾಮಿಕ್ ಶೃಂಗ ಸಭೆಯನ್ನು ಕರೆಯುವಂತೆ ಪಾಕಿಸ್ತಾನ ಸರಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಆಯೋಜಿಸಲಾಗಿತ್ತು.

ಭಾರತದಲ್ಲಿ ಹಲವಾರು ಭಯೋತ್ಪಾದಕ ಕೃತ್ಯಗಳನ್ನು ನಡೆಸಿರುವ ಉಗ್ರನ ಜೊತೆ ಫೆಲೆಸ್ತೀನ್ ರಾಯಭಾರಿ ವೇದಿಕೆ ಹಂಚಿರುವುದದ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಭಾರತ ಈ ಬಗ್ಗೆ ಫೆಲಿಸ್ತೀನ್‌ಗೆ ತನ್ನ ಅಸಮಾಧನವನ್ನು ವ್ಯಕ್ತಪಡಿಸಿತ್ತು.

ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ತಮ್ಮ ಜೊತೆ ನಿಲ್ಲುವುದಾಗಿ ಮತ್ತು ಭಾರತದ ವಿರುದ್ಧ ಭಯೋತ್ಪಾದಕ ಕೃತ್ಯದಲ್ಲಿ ತೊಡಗುವವರ ಜೊತೆ ಯಾವುದೇ ಸಂಪರ್ಕ ಹೊಂದುವುದಿಲ್ಲ ಎಂದು ಫೆಲೆಸ್ತೀನ್ ಮತ್ತೊಮ್ಮೆ ಭಾರತಕ್ಕೆ ಭರವಸೆ ನೀಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ಕೆಲದಿನಗಳ ಹಿಂದೆ ಇಸ್ರೇಲ್‌ನ ರಾಜಧಾನಿಯನ್ನು ಜೆರುಸಲೇಮ್‌ಗೆ ಸ್ಥಳಾಂತರಿಸಬೇಕು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರದ ವಿರುದ್ಧ ಸಂಯುಕ್ತ ರಾಷ್ಟ್ರ ಸಾಮಾನ್ಯಸಭೆಯಲ್ಲಿ ಭಾರತವು ಮತ ಚಲಾಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News