ಏಕಾಂಗಿ ಪರ್ವತಾರೋಹಣಕ್ಕೆ ನೇಪಾಳ ನಿಷೇಧ
ಕಾಠ್ಮಂಡು,ಡಿ.30: ಎವರೆಸ್ಟ್ ಸೇರಿದಂತೆ ತನ್ನ ದೇಶದ ಪರ್ವತಗಳನ್ನು ಪರ್ವತಾರೋಹಿಗಳು ಏಕಾಂಗಿಯಾಗಿ ಏರುವುದನ್ನು ನೇಪಾಳ ಸರಕಾರವು ನಿಷೇಧಿಸಿದೆ.
ನೇಪಾಳ ಸರಕಾರವು ಗುರುವಾರ ನಡೆಸಿದ ಸಂಪುಟ ಸಭೆಯು ದೇಶದ ಪರ್ವತಾರೋಹಣಕ್ಕೆ ಸಂಬಂಧಿಸಿದ ನಿಯಮಗಳ ಪರಿಷ್ಕರಣೆಗೆ ಅನುಮೋದನೆ ನೀಡಿದೆ. 2018ರ ಬೇಸಿಗೆ ಪರ್ವತಾರೋಹಣದ ಋತುವಿಗೆ ಮುಂಚಿತವಾಗಿ ನೇಪಾಳ ಸರಕಾರವು ಈ ಹೊಸ ನಿಯಮಗಳನ್ನು ಜಾರಿಗೊಳಿಸಲಿದೆ. ಪರ್ವತಾರೋಹಣವು ಸುರಕ್ಷಿತವಾಗುವಂತೆ ಹಾಗೂ ಪರ್ವತಾರೋಹಿಗಳ ಸಾವಿನ ಸಂಖ್ಯೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಪರಿಷ್ಕೃತ ಕಾನೂನನ್ನು ಜಾರಿಗೆ ತರಲಾಗಿದೆಯೆಂದು ಪ್ರವಾಸೋದ್ಯಮ ಹಾಗೂ ನಾಗರಿಕ ವಾಯುಯಾನ ಸಚಿವಾಲಯದ ಕಾರ್ಯದರ್ಶಿ ಮಹೇಶ್ವರ್ ನೆಪೂನ್ ತಿಳಿಸಿದ್ದಾರೆ.
ಈ ವರ್ಷದ ಎಪ್ರಿಲ್‌ನಲ್ಲಿ ಸ್ವಿಸ್ ಪರ್ವತಾರೋಹಿ ಉಯೆಲಿ ಸ್ಟೆಕ್ ಎವರೆಸ್ಟ್‌ಗೆ ಸಮೀಪವಿರುವ ನ್ಯೂಪ್ಸೆ ಶಿಖರವನ್ನು ಏಕಾಂಗಿಯಾಗಿ ಹತ್ತುತ್ತಿದ್ದಾಗ ಕಡಿದಾದ ಪ್ರದೇಶದಲ್ಲಿ ಜಾರಿಬಿದ್ದು ಸಾವನ್ನಪ್ಪಿದ್ದರು.
ಅಂಗವಿಕಲರು ಹಾಗೂ ಅಂಧರು ಪರ್ವತಾರೋಹಣ ಮಾಡುವುದನ್ನೂ ನೂತನ ಕಾನೂನು ನಿಷೇಧಿಸಿದೆ.
‘‘ಅಂಗವಿಕಲರಿಗೆ ಪರ್ವತಾರೋಹಣವನ್ನು ನಿಷೇಧಿಸಿರುವುದನ್ನು ಮಾಜಿ ಗೂರ್ಖಾ ಯೋಧ ಹರಿ ಬುಧ ಮಾಗರ್ ಖಂಡಿಸಿದ್ದಾರೆ. ಸಂಪುಟವು ಈ ವಿಧೇಯಕವನ್ನು ಅಂಗೀಕರಿಸಿದರೆ, ಅದು ಭಿನ್ನಸಾಮರ್ಥ್ಯದ ವ್ಯಕ್ತಿಗಳ ವಿರುದ್ಧ ತಾರತಮ್ಯ ಮಾಡಿದಂತಾಗುತ್ತದೆ’’ಎಂದು ಮಾಗರ್ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಸಂದೇಶವೊಂದರಲ್ಲಿ ತಿಳಿಸಿದ್ದಾರೆ. ಪರ್ವತಾರೋಹಣ ಆಕಾಂಕ್ಷಿಯಾದ ಮಾಗರ್ ಅಫ್ಘಾನಿಸ್ತಾನದಲ್ಲಿ ಸೇನಾ ಕರ್ತವ್ಯದಲ್ಲಿ ನಿಯೋಜಿತನಾಗಿದ್ದ ವೇಳೆ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದರು.