ಏಕದಿನ ರ‍್ಯಾಂಕಿಂಗ್‌: ಅಗ್ರ ಸ್ಥಾನ ಕಾಯ್ದುಕೊಂಡ ಕೊಹ್ಲಿ

Update: 2017-12-31 18:31 GMT

 ದುಬೈ, ಡಿ.31: ಭಾರತದ ನಾಯಕ ವಿರಾಟ್ ಕೊಹ್ಲಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುವುದರೊಂದಿಗೆ 2017ನೇ ವರ್ಷವನ್ನು ಕೊನೆಗೊಳಿಸಿದ್ದಾರೆ. ಕೊಹ್ಲಿ ಏಕದಿನ ಮಾತ್ರವಲ್ಲ ಟೆಸ್ಟ್ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು, ಟೆಸ್ಟ್, ಟಿ-20 ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾರಮ್ಯ ಸಾಧಿಸಿದ್ದು ಮೂರು ದ್ವಿಶತಕ ಸಹಿತ ಒಟ್ಟು 5 ಶತಕಗಳನ್ನು ದಾಖಲಿಸಿದ್ದಾರೆ. ಕೊಹ್ಲಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಸ್ಟೀವನ್ ಸ್ಮಿತ್ ಬಳಿಕ 2ನೇ ಸ್ಥಾನದಲ್ಲಿದ್ದಾರೆ. ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಔಟಾಗದೆ ದ್ವಿಶತಕ ದಾಖಲಿಸಿದ್ದ ಅಲಿಸ್ಟರ್ ಕುಕ್ 9 ಸ್ಥಾನ ಭಡ್ತಿ ಪಡೆದು 8ನೇ ಸ್ಥಾನಕ್ಕೇರಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ 76 ಹಾಗೂ ಔಟಾಗದೆ 102 ರನ್ ಗಳಿಸಿರುವ ಸ್ಮಿತ್ ನಂ.1 ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಇಂಗ್ಲೆಂಡ್ ನಾಯಕ ಜೋ ರೂಟ್ ಒಂದು ಸ್ಥಾನ ಭಡ್ತಿ ಪಡೆದು ಕಿವೀಸ್‌ನ ವಿಲಿಯಮ್ಸನ್‌ರೊಂದಿಗೆ 4ನೇ ಸ್ಥಾನ ಹಂಚಿಕೊಂಡಿದ್ದಾರೆ. ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಭಾರತದ ಅವಳಿ ಸ್ಪಿನ್ನರ್‌ಗಳಾದ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜ, ಲಂಕಾದ ರಂಗನ ಹೆರಾತ್ 2017ರ ಆರಂಭದಲ್ಲಿ ಅಗ್ರ-3ರಲ್ಲಿದ್ದರು. ವರ್ಷಾಂತ್ಯಕ್ಕೆ ಕ್ರಮವಾಗಿ 3ನೇ, 4ನೇ ಹಾಗೂ 6ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News