ನೂತನ ಎಚ್-1ಬಿ ವೀಸಾ ನೀತಿ: ಅಮೆರಿಕದಿಂದ 7.5 ಲಕ್ಷ ಭಾರತೀಯರು ಮನೆಗೆ?
ವಾಶಿಂಗ್ಟನ್, ಜ. 2: ಎಚ್-1ಬಿ ವೀಸಾದಾರರಿಗೆ ಸಂಬಂಧಿಸಿ ಅಮೆರಿಕದ ಟ್ರಂಪ್ ಆಡಳಿತವು ನೂತನ ಪ್ರಸ್ತಾಪವೊಂದನ್ನು ಪರಿಶೀಲಿಸುತ್ತಿದೆ. ಈ ಪ್ರಸ್ತಾಪವು ಕಾರ್ಯರೂಪಕ್ಕೆ ಬಂದರೆ, ಪ್ರಸ್ತುತ ಎಚ್-1ಬಿ ವೀಸಾಗಳ ಆಧಾರದಲ್ಲಿ ಅಮೆರಿಕದಲ್ಲಿದ್ದು ‘ಗ್ರೀನ್ ಕಾರ್ಡ್’ಗಾಗಿ ಕಾಯುತ್ತಿರುವ ಅತಿ ಪರಿಣತ ವಿದೇಶಿ ಕೆಲಸಗಾರರು ಸಾಮೂಹಿಕ ಗಡಿಪಾರಾಗುವ ಸಾಧ್ಯತೆಯಿದೆ.
ಎಚ್-1ಬಿ ವೀಸಾಗಳನ್ನು ಹೊಂದಿರುವವರ ಪೈಕಿ ಹೆಚ್ಚಿನವರು ಭಾರತೀಯರೇ ಆಗಿದ್ದಾರೆ.
ಅದೇ ವೇಳೆ, ನೂತನ ಪ್ರಸ್ತಾಪವು ಉನ್ನತ ತಂತ್ರಜ್ಞಾನ ಕಂಪೆನಿಗಳು ಅಮೆರಿಕದಲ್ಲಿ ಕೆಲಸ ಮಾಡುವ ರೀತಿಯನ್ನೇ ಬದಲಾಯಿಸುವ ಸಾಧ್ಯತೆಯಿದೆ.
ಪೌರತ್ವ ಮತ್ತು ವಲಸೆಯ ಉಸ್ತುವಾರಿ ಹೊಂದಿರುವ ಆಂತರಿಕ ಭದ್ರತಾ ಇಲಾಖೆಯಲ್ಲಿ ಆಂತರಿಕ ಮೆಮೊ ಆಗಿ ಚಲಾವಣೆಗೆ ಬಿಡಲಾಗಿರುವ ಪ್ರಸ್ತಾಪವು, ಖಾಯಂ ವಾಸ್ತವ್ಯ (ಗ್ರೀನ್ ಕಾರ್ಡ್) ಕೋರಿ ಅರ್ಜಿ ಸಲ್ಲಿಸಿರುವ ಎಚ್-1ಬಿ ವೀಸಾದಾರರಿಗೆ ವಿಸ್ತರಣೆಗಳನ್ನು ನೀಡುವ ಅವಕಾಶವನ್ನು ನಿಲ್ಲಿಸಲು ಉದ್ದೇಶಿಸಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ‘ಅಮೆರಿಕನ್ನರ ಉತ್ಪನ್ನಗಳನ್ನು ಖರೀದಿಸಿ, ಅಮೆರಿಕನ್ನರನ್ನು ಕೆಲಸಕ್ಕೆ ನೇಮಿಸಿ’ (ಬಯ್ ಅಮೆರಿಕನ್, ಹಯರ್ ಅಮೆರಿಕನ್) ನೀತಿಗೆ ಅನುಗುಣವಾಗಿ ರೂಪುಗೊಂಡಿರುವ ಈ ಪ್ರಸ್ತಾಪವನ್ನು ಜಾರಿಗೊಳಿಸಲು ಅಮೆರಿಕ ಸರಕಾರ ಮುಂದಾದರೆ 5 ಲಕ್ಷದಿಂದ 7.5 ಲಕ್ಷದಷ್ಟಿರುವ ಎಚ್-1ಬಿ ಭಾರತೀಯ ವೀಸಾದಾರರು ಮನೆಗೆ ಮರಳುವ ಸಾಧ್ಯತೆಯಿದೆ.
ಭಾರತದಲ್ಲಿ ಲಕ್ಷಾಂತರ ಕುಟುಂಬಗಳು ಸಂಕಷ್ಟಕ್ಕೆ: ಇಮಿಗ್ರೇಶನ್ ವಾಯ್ಸ್
‘‘ನೂತನ ಪ್ರಸ್ತಾಪವು ಜಾರಿಗೆ ಬಂದರೆ, ಭಾರತೀಯರ ಸಾಮೂಹಿಕ ಗಡಿಪಾರಿಗೆ ಕಾರಣವಾಗಬಹುದು ಹಾಗೂ ಭಾರತದಲ್ಲಿರುವ ಲಕ್ಷಾಂತರ ಕುಟುಂಬಗಳು ಬಿಕ್ಕಟ್ಟಿಗೆ ಸಿಲುಕಬಹುದು’’ ಎಂದು ಸಾನ್ ಜೋಸ್‌ನಲ್ಲಿರುವ ‘ಇಮಿಗ್ರೇಶನ್ ವಾಯ್ಸ್’ ಎಂಬ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಈ ಪ್ರಸ್ತಾಪವು ಜಾರಿಗೊಳ್ಳದಂತೆ ಇಮಿಗ್ರೇಶನ್ ವಾಯ್ಸ್ ಹೋರಾಟ ನಡೆಸುತ್ತಿದೆ. ಆರಂಭದಲ್ಲಿ ಅದು ತನ್ನ ಪ್ರಭಾವವನ್ನು ಬಳಸಿ ಸರಕಾರದ ಮೇಲೆ ಒತ್ತಡ ಹೇರಲಿದೆ. ಅಂತಿಮವಾಗಿ ಅಮೆರಿಕ ಸರಕಾರದ ನೀತಿಯನ್ನು ಅದು ನ್ಯಾಯಾಲಯಗಳಲ್ಲಿ ಪ್ರಶ್ನಿಸಲಿದೆ.