×
Ad

15 ವರ್ಷಗಳ ಬಳಿಕ ಹೊಸ ದಾಖಲೆ ಬರೆದ ರಾಜ್ಯಸಭೆ

Update: 2018-01-02 21:20 IST

ಹೊಸದಿಲ್ಲಿ,ಜ.2: ಚಳಿಗಾಲದ ಅಧಿವೇಶನದ ಕೋಲಾಹಲಪೂರಿತ ಆರಂಭಕ್ಕೆ ವ್ಯತಿರಿಕ್ತವಾಗಿ ರಾಜ್ಯಸಭೆಯು ಮಂಗಳವಾರ ಪ್ರಶ್ನೆವೇಳೆಯಲ್ಲಿ ಪಟ್ಟಿ ಮಾಡಲಾಗಿದ್ದ ಎಲ್ಲ 15 ಚುಕ್ಕಿ ಗುರುತಿನ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ 15 ವರ್ಷಗಳ ಬಳಿಕ ಹೊಸ ದಾಖಲೆಯೊಂದನ್ನು ಬರೆಯಿತು. ಇದೇ ಸಂದರ್ಭ ಶೂನ್ಯವೇಳೆಯಲ್ಲಿ 18 ಸದಸ್ಯರು ಸಾರ್ವಜನಿಕ ಮಹತ್ವದ ವಿಷಯಗಳ ಕುರಿತು ಮಾತನಾಡಿದರು.

ಈ ಹಿಂದೆ 2002ರಲ್ಲಿ ರಾಜ್ಯಸಭೆಯ 197ನೇ ಅಧಿವೇಶನದಲ್ಲಿ ಎಲ್ಲ ಚುಕ್ಕಿ ಗುರುತಿನ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು ಎಂದು ರಾಜ್ಯಸಭಾ ಸಚಿವಾಲಯದ ಅಧಿಕಾರಿಗಳು ತಿಳಿಸಿದರು.

ಪಟ್ಟಿಯಲ್ಲಿದ್ದ ಪ್ರಶ್ನೆಗಳನ್ನು ಕೇಳಿದ್ದ 20 ಸದಸ್ಯರ ಪೈಕಿ 10 ಜನರು ಗೈರುಹಾಜರಾಗಿ ದ್ದರಾದರೂ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಹಲವಾರು ಸದಸ್ಯರಿಗೆ ಪೂರಕ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಿದ್ದು ಈ ದಾಖಲೆ ಸೃಷ್ಟಿಗೆ ನೆರವಾಯಿತು.

 ಶೂನ್ಯವೇಳೆಯಲ್ಲಿ ಸದಸ್ಯರು ಸಾರ್ವಜನಿಕ ಮಹತ್ವದ ವಿಷಯಗಳನ್ನು ಎತ್ತುತ್ತಾರೆ ಮತ್ತು ಪ್ರಶ್ನೆವೇಳೆಯಲ್ಲಿ ಸರಕಾರಕ್ಕೆ ಪ್ರಶ್ನೆಗಳನ್ನು ಕೇಳುತ್ತಾರೆ. ಪ್ರಶ್ನೆಗಳನ್ನು ಕೇಳಿದ್ದ ಹಲವಾರು ಸದಸ್ಯರು ಗೈರುಹಾಜರಾಗಿದ್ದನ್ನು ಗಮನಿಸಿದ ನಾಯ್ಡು, ‘ಏನೋ ವಿಶೇಷವಾದುದು ಸಂಭವಿಸಲಿದೆ ’ಎಂದು ಹೇಳಿದರು. ಸದಸ್ಯರ ಗೈರುಹಾಜರಿಯನ್ನು ಪ್ರಸ್ತಾಪಿಸಿದ ಅವರು, ಸದಸ್ಯರಿಗೆ ಸ್ವಾತಂತ್ರ್ಯವಿದೆ ಮತ್ತು ತಾನವರನ್ನು ಪ್ರಶ್ನಿಸುವುದಿಲ್ಲ ಎಂದರು.

ಆದರೆ ಇದೇ ವೇಳೆ ನಮಗೆ ಜವಾಬ್ದಾರಿಯಿದೆ. ನೀವು ಪ್ರಶ್ನೆಯೊಂದನ್ನು ಸಲ್ಲಿಸಿದರೆ ಅಷ್ಟೊಂದು ಸಮಯ, ಶಕ್ತಿ ಮತ್ತು ಸಂಪನ್ಮೂಲಗಳು ವ್ಯಯವಾಗುತ್ತವೆ. ಸದನಕ್ಕೆ ಬಾರದಿರುವುದು ಒಳ್ಳೆಯ ಪದ್ಧತಿಯಲ್ಲ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.

ದಾಖಲೆ ಸೃಷ್ಟಿಯ ಬಳಿಕ ಸುಗಮ ಕಲಾಪ ನಿರ್ವಹಣೆಗಾಗಿ ಕೆಲವು ಸದಸ್ಯರು ಅಭಿನಂದಿಸಿದಾಗ ನಾಯ್ಡು, ನಿಮ್ಮೆಲ್ಲರ ಒಳ್ಳೆಯ ಸಹಕಾರವಿತ್ತು, ಹೀಗಾಗಿ ಈದಾಖಲೆ ಸೃಷ್ಟಿಯಾಗಿದೆ ಎಂದರು.

ಜಿಎಸ್‌ಟಿ ಫೈಲಿಂಗ್, ಭಾರತದ ನವೀಕರಿಸಬಹುದಾದ ಶಕ್ತಿ ಕಂಪನಿಗಳ ಕಳಪೆ ರೇಟಿಂಗ್, ಕ್ರಿಪ್ಟೊಕರೆನ್ಸಿಗಳ ನಿಯಂತ್ರಣ ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಕುರಿತು ಸದಸ್ಯರು ಸರಕಾರದಿಂದ ಉತ್ತರಗಳನ್ನು ಕೋರಿದರು.

ಶೂನ್ಯವೇಳೆಯಲ್ಲಿ ಸಾರ್ವಜನಿಕ ಮಹತ್ವದ ವಿಷಯಗಳ ಮೇಲೆ ಮಾತನಾಡಲು 11 ಸದಸ್ಯರಿಗೆ ಅವಕಾಶ ನೀಡಿದ ನಾಯ್ಡು, ಇತರ ಏಳು ಸದಸ್ಯರಿಗೆ ತಮ್ಮ ವಿಶೇಷ ಉಲ್ಲೇಖಗಳನ್ನು ಓದಲು ಅನುಮತಿ ನೀಡಿದರು.

ಕಲಾಪ ವ್ಯತ್ಯಯ ಮತ್ತು ಸಮಯದ ಕೊರತೆಯಿಂದಾಗಿ ಸಾಮಾನ್ಯವಾಗಿ ವಿಶೇಷ ಉಲ್ಲೇಖಗಳನ್ನು ದಿನದಂತ್ಯದಲ್ಲಿ ಸದನದಲ್ಲಿ ಮಂಡಿಸಲಾಗುತ್ತದೆ. ಆದರೆ ನಾಯ್ಡು ಅವರು ಭೋಜನಪೂರ್ವ ಅವಧಿಯಲ್ಲಿಯೇ ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.

ಸದಸ್ಯರ ಹರ್ಷದ ನಡುವೆಯೇ ನಾಯ್ಡು ಅವರು, ರಾಜ್ಯಸಭೆಯು ಇಂದು ಇತಿಹಾಸ ವನ್ನು ಸೃಷ್ಟಿಸಿದೆ. ಮೊದಲ ಬಾರಿಗೆ ಎಲ್ಲ ಶೂನ್ಯವೇಳೆ ಸಲ್ಲಿಕೆಗಳನ್ನು, ಎಲ್ಲ ವಿಶೇಷ ಉಲ್ಲೇಖಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News