2014,ಎ.1ರ ಮೊದಲಿನ ಬ್ಯಾಂಕ್ ಸಾಲಗಳು ಹೆಚ್ಚಿನ ಎನ್‌ಪಿಎಗೆ ಕಾರಣ: ಜೇಟ್ಲಿ
Update: 2018-01-02 21:43 IST
ಹೊಸದಿಲ್ಲಿ,ಜ.2: 2014,ಎಪ್ರಿಲ್ 1ರ ಮೊದಲು ನೀಡಲಾಗಿದ್ದ ಸಾಲಗಳು ಬ್ಯಾಂಕುಗಳ ಹೆಚ್ಚಿನ ಅನುತ್ಪಾದಕ ಆಸ್ತಿ(ಎನ್‌ಪಿಎ)ಗಳಿಗೆ ಕಾರಣಗಳಾಗಿವೆ. ಈ ಸಾಲಗಳನ್ನು ಸಂಭಾವ್ಯ ಅಪಾಯದ ಸೂಕ್ತ ಪರಿಶೀಲನೆಯಿಲ್ಲದೆ, ಭದ್ರತೆಗಳೂ ಇಲ್ಲದೆ ಬೇಕಾಬಿಟ್ಟಿಯಾಗಿ ನೀಡಲಾಗಿತ್ತು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದರು.
ಸರಕಾರವು ಯಾವುದೇ ಬ್ಯಾಂಕ್ ಸಾಲವನ್ನು ತೊಡೆದುಹಾಕಿಲ್ಲ ಮತ್ತು ಈ ಸಾಲಗಳನ್ನು ಮರುಪಾವತಿಸುವ ಬಾಧ್ಯತೆ ಸಾಲಗಾರರಿಗೆ ಇದೆ ಎಂದು ಅವರು ಸ್ಪಷ್ಟಪಡಿಸಿದರು.
ಸಾಲಗಾರರಿಗೆ ಸಂಬಂಧಿಸಿದಂತೆ ಅವರ ಹೊಣೆಗಾರಿಕೆ ಇದ್ದೇ ಇದೆ. ಆದರೆ ಬ್ಯಾಂಕುಗಳು ತಾವು ಕೋರಿರುವ ಆದಾಯ ತೆರಿಗೆ ರಿಯಾಯಿತಿ ದೊರೆಯುವಂತಾಗಲು ಸಾಲದ ಸ್ವರೂಪವನ್ನು ಬದಲಿಸುತ್ತವೆ. ಸರಕಾರಿ ಬ್ಯಾಂಕುಗಳು 55,000 ಕೋ.ರೂ.ಗಳ ಸಾಲವನ್ನು ಮನ್ನಾ ಮಾಡಿವೆ ಎಂಬ ತಪ್ಪುಗ್ರಹಿಕೆ ದೂರವಾಗಬೇಕಿದೆ ಎಂದು ಜೇಟ್ಲಿ ಹೇಳಿದರು.