ಜೆಎನ್ ಯು ಕ್ಯಾಂಪಸ್ ನ ಮರದಲ್ಲಿ ಕೊಳೆತ ಮೃತದೇಹ ಪತ್ತೆ
Update: 2018-01-02 21:53 IST
ಹೊಸದಿಲ್ಲಿ, ಜ.2: ದಕ್ಷಿಣ ದಿಲ್ಲಿಯ ಜವಾಹರ್ ಲಾಲ್ ನೆಹರೂ ಯುನಿವರ್ಸಿಟಿ ಕ್ಯಾಂಪಸ್ ನ ಮರವೊಂದರಲ್ಲಿ ವ್ಯಕ್ತಿಯೊಬ್ಬರ ಕೊಳೆತ ಮೃತದೇಹ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತದೇಹದ ಬಟ್ಟೆಯಲ್ಲಿದ್ದ ದಾಖಲೆಗಳಿಂದ ಈ ವ್ಯಕ್ತಿಯನ್ನು ನಜಾಫ್ ಗರ್ ನ ರಾಮ್ ಪ್ರವೇಶ್ ಎಂದು ಗುರುತಿಸಲಾಗಿದೆ.
“ಕಳೆದ 6-7 ದಿನಗಳಿಂದ ಮರದಲ್ಲಿ ಮೃತದೇಹವು ನೇತಾಡುತ್ತಿತ್ತು ಎಂದು ಶಂಕಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ಮಿಲಿಂದ್ ಮಹಾದಿಯೋ ಮಾಹಿತಿ ನೀಡಿದ್ದಾರೆ.
ಮೃತಪಟ್ಟ ವ್ಯಕ್ತಿ ಸುಮಾರು 40 ವರ್ಷದವನಾಗಿರಬಹುದು. ಮೊಬೈಲ್ ಫೋನ್, ಆಧಾರ್ ಕಾರ್ಡ್, ಮತದಾರ ಗುರುತು ಪತ್ರ ಹಾಗು ಡ್ರೈವಿಂಗ್ ಲೈಸನ್ಸ್ ಪತ್ತೆಯಾಗಿದೆ.
ಜೆಎನ್ ಯು ಕ್ಯಾಂಪಸ್ ನ ಅರಣ್ಯ ಭಾಗದಲ್ಲಿ ಮೃತದೇಹವೊಂದು ಮರದಲ್ಲಿ ನೇತಾಡುತ್ತಿದೆ ಎಂದು ಯಾರೋ ಮಾಹಿತಿ ನೀಡಿದ್ದರು. ಮರಣೋತ್ತರ ಪರೀಕ್ಷೆ ಸಂಪೂರ್ಣಗೊಂಡ ನಂತರ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ ಎಂದವರು ಹೇಳಿದ್ದಾರೆ.