ಕಲ್ಲಾಪು: ಟಯರ್ ಅಂಗಡಿಗೆ ಬೆಂಕಿ; ದುಷ್ಕೃತ್ಯದ ಶಂಕೆ

Update: 2018-01-03 07:43 GMT

ಉಳ್ಳಾಲ, ಜ.3: ಟಯರ್ ಅಂಗಡಿಯೊಂದು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಅಪಾರ ಪ್ರಮಾಣದಲ್ಲಿ ನಷ್ಟಕ್ಕೊಳಗಾದ ಘಟನೆ ಕಲ್ಲಾಪು ಮಸೀದಿಯ ಬಳಿ ನಿನ್ನೆ ರಾತ್ರಿ ನಡೆದಿದೆ.

ಬಿ.ಸಿ.ರೋಡಿನ ಅಬ್ಬಾಸ್ ಎಂಬವರಿಗೆ ಸೇರಿದ ಅಂಗಡಿ ಇದಾಗಿದೆ. ಈ ಟಯರ್ ಅಂಗಡಿಯಲ್ಲಿ ಹೊಸ ಟಯರುಗಳ ಮಾರಾಟ, ರೀಸೋಲ್ ಮಾಡುವುದು ಹಾಗೂ ಪಂಕ್ಚರ್ ಸರಿಪಡಿಸಲಾಗುತ್ತಿತ್ತು. ನಿನ್ನೆ ರಾತ್ರಿ ಅಬ್ಬಾಸ್ ಅವರು ಅಂಗಡಿಯನ್ನು ಮುಚ್ಚಿ ಹೋದ ಬಳಿಕ ಈ ಬೆಂಕಿ ಅನಾಹುತ ಸಂಭವಿಸಿದೆ. ಈ ಕುರಿತಂತೆ ಮಾತನಾಡಿದ ಅಬ್ಬಾಸ್, ಇದೊಂದು ದುಷ್ಕೃತ್ಯ. ಇದು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ್ದಲ್ಲ. ಉದ್ದೇಶಪೂರ್ವಕವಾಗಿ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಂಕಿಯಿಂದ ಅಂಗಡಿಯ ಹೊರಭಾಗದಲ್ಲಿ ಹಲವಾರು ಟಯರ್‌ಗಳು ಸುಟ್ಟು ಹೋಗಿವೆ. ಇದಲ್ಲದೆ ಅಂಗಡಿಯ ಒಳಭಾಗಕ್ಕೂ ಬೆಂಕಿ ವ್ಯಾಪಿಸಿದ್ದು, ಹಲವು ಹೊಸ ಟಯರ್‌ಗಳು ಹಾಗೂ ರೀಸೋಲ್ ಮಾಡಿಡಲಾಗಿದ್ದ ಟಯರ್‌ಗಳು ಬೆಂಕಿಗೆ ಆಹುತಿಯಾಗಿವೆೆ. ಇದೇ ಪಂಕ್ಚರ್ ಸರಿಪಡಿಸುವ ಯಂತ್ರಕ್ಕೂ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಬೆಂಕಿಯಿಂದ ಸುಮಾರು 4 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂಗಡಿ ಮಾಲಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News