ಇಬ್ಬರು ದೋಷಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿದ ದಿಲ್ಲಿ ಹೈಕೋರ್ಟ್

Update: 2018-01-04 13:57 GMT

ಹೊಸದಿಲ್ಲಿ,ಜ.4: 2009ರಲ್ಲಿ ನಡೆದಿದ್ದ ಐಟಿ ಉದ್ಯೋಗಿ ಜಿಗಿಷಾ ಘೋಷ್(28) ಕೊಲೆ ಪ್ರಕರಣದಲ್ಲಿ ದೋಷಿಗಳಾದ ರವಿ ಕಪೂರ್ ಮತ್ತು ಅಮಿತ್ ಶುಕ್ಲಾ ಅವರಿಗೆ ವಿಚಾರಣಾ ನ್ಯಾಯಾಲಯವು ವಿಧಿಸಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿ ದಿಲ್ಲಿ ಉಚ್ಚ ನ್ಯಾಯಾಲಯವು ಗುರುವಾರ ಆದೇಶಿಸಿದೆ.

ಆದರೆ ನ್ಯಾಯಮೂರ್ತಿಗಳಾದ ಎಸ್.ಮುರಳೀಧರ ಮತ್ತು ಐ.ಎಸ್.ಮೆಹ್ತಾ ಅವರ ಪೀಠವು ಮೂರನೇ ದೋಷಿ ಬಲಜೀತ ಮಲ್ಲಿಕ್‌ಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

 ವಿಚಾರಣಾ ನ್ಯಾಯಾಲಯವು 2016ರಲ್ಲಿ ಕಪೂರ ಮತ್ತು ಶುಕ್ಲಾ ಅವರಿಗೆ ಮರಣ ದಂಡನೆಯನ್ನು ವಿಧಿಸಿದ್ದರೆ, ಜೈಲಿನಲ್ಲಿ ತನ್ನ ಒಳ್ಳೆಯ ನಡವಳಿಕೆಯಿಂದಾಗಿ ಮಲ್ಲಿಕ್ ಗಲ್ಲುಶಿಕ್ಷೆಯಿಂದ ಪಾರಾಗಿದ್ದ. ನ್ಯಾಯಾಲಯವು ಆತನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.

ಢಕಾಯಿತಿ ಕೊಲೆಯ ಹಿಂದಿನ ಉದ್ದೇಶವಾಗಿತ್ತು ಎಂದು ಪೊಲೀಸರು ಪ್ರತಿಪಾದಿಸಿದ್ದರು.

ಕಪೂರ್ ಮತ್ತು ಶುಕ್ಲಾ ಅವರ ದೋಷನಿರ್ಣಯ ಮತ್ತು ಶಿಕ್ಷೆಯ ಆದೇಶವನ್ನು ರದ್ದುಗೊಳಿಸುವಂತೆ ಕೋರಿದ್ದ ಅವರ ವಕೀಲರು, ಕೇವಲ ತಾರತಮ್ಯದಿಂದ ಕೂಡಿದ್ದ ಜೈಲು ವರದಿಯ ಆಧಾರದಲ್ಲಿ ತನ್ನ ಕಕ್ಷಿದಾರರಿಗೆ ಮರಣ ದಂಡನೆ ಮತ್ತು ಮಲಿಕ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಮೂಲಕ ವಿಚಾರಣಾ ನ್ಯಾಯಾಲಯವು ತಪ್ಪು ಮಾಡಿದೆ ಎಂದು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News