ಐದನೇ ಟೆಸ್ಟ್: ಶತಕ ವಂಚಿತ ಜೋ ರೂಟ್

Update: 2018-01-04 18:24 GMT

ಸಿಡ್ನಿ,ಜ.4: ಆಸ್ಟ್ರೇಲಿಯ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ನ ಮೊದಲ ದಿನ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಶತಕ ವಂಚಿತಗೊಂಡಿದ್ದಾರೆ.ಇದರೊಂದಿಗೆ ಸರಣಿಯಲ್ಲಿ ಮೊದಲ ಶತಕ ದಾಖಲಿಸುವಲ್ಲಿ ಅವರು ಮತ್ತೊಮ್ಮೆ ಎಡವಿದ್ದಾರೆ.

 ಟೆಸ್ಟ್‌ನ ಮೊದಲ ದಿನವಾಗಿರುವ ಗುರುವಾರ ಮೊದಲ ಇನಿಂಗ್ಸ್ ನಲ್ಲಿ ರೂಟ್ ಅವರು 83 ರನ್ ಗಳಿಸಿ ಔಟಾಗಿದ್ದಾರೆ.

80.3ನೇ ಓವರ್‌ನಲ್ಲಿ ರೂಟ್ ಅವರು ಸ್ಟಾರ್ಕ್ ಎಸೆತದಲ್ಲಿ ಮಿಚೆಲ್ ಮಾರ್ಷ್‌ಗೆ ಕ್ಯಾಚ್ ನೀಡುವುದರೊಂದಿಗೆ ಶತಕ ವಂಚಿತಗೊಂಡರು.

 ಮೊದಲ ದಿನದಾಟದಂತ್ಯಕ್ಕೆ ಆಟ ನಿಂತಾಗ ಇಂಗ್ಲೆಂಡ್ 81.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 233 ರನ್ ಗಳಿಸಿತ್ತು. ಅರ್ಧಶತಕ ದಾಖಲಿಸಿರುವ ಡೇವಿಡ್ ಮಲಾನ್(55) ಅವರು ಔಟಾಗದೆ ಕ್ರೀಸ್‌ನಲ್ಲಿದ್ದಾರೆ.

  ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ ಜೋಶ್ ಹೇಝಲ್‌ವುಡ್ (47ಕ್ಕೆ 2), ಪ್ಯಾಟ್ ಕಮಿನ್ಸ್(44ಕ್ಕೆ 2), ಮಿಚೆಲ್ ಸ್ಟಾರ್ಕ್(63ಕ್ಕೆ 1) ದಾಳಿಗೆ ಸಿಲುಕಿ 95ಕ್ಕೆ 3 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಆಗಮಿಸಿದ ಮಲಾನ್ ಅವರು ರೂಟ್‌ಗೆ ಉತ್ತಮ ಬೆಂಬಲ ನೀಡಿದರು.

 ಮಲಾನ್ ಮತ್ತು ರೂಟ್ ಅವರು 133 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನ್ನು 220ರ ಗಡಿ ದಾಟಿಸಿದರು. ಮಲಾನ್ ಅವರು ಎರಡು ಬಾರಿ ಜೀವದಾನ ಪಡೆದರು. ಒಂದು ಬಾರಿ ರನೌಟ್ ಮತ್ತೊಂದು ಬಾರಿ ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಕ್ಯಾಚ್ ಕೈಚೆಲ್ಲುವುದರೊಂದಿಗೆ ಜೀವದಾನ ಪಡೆದು ಅರ್ಧಶತಕ ದಾಖಲಿಸಿದರು. ರೂಟ್ ಅವರು 141 ಎಸೆತಗಳಲ್ಲಿ 8 ಬೌಂಡರಿಗಳ ಸಹಾಯದಿಂದ 83 ರನ್ ಗಳಿಸಿದರು. ರೂಟ್ ನಿರ್ಗಮನದ ಬಳಿಕ ಕ್ರೀಸ್‌ಗೆ ಆಗಮಿಸಿದ ವಿಕೆಟ್ ಕೀಪರ್ ಜಾನಿ ಬೈರ್‌ಸ್ಟೋವ್ ಅವರು 5 ರನ್ ಗಳಿಸಿ ಹೇಝಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು.

ಇನಿಂಗ್ಸ್ ಆರಂಭಿಸಿದ ಅಲಿಸ್ಟರ್ ಕುಕ್ ಮತ್ತು ಮಾರ್ಕ್ ಸ್ಟೋನ್‌ಮ್ಯಾನ್ ಅವರು ಮೊದಲ ವಿಕೆಟ್‌ಗೆ 28 ರನ್ ಗಳಿಸಿದರು. 9.5ನೇ ಓವರ್‌ನಲ್ಲಿ ಆರಂಭಿಕ ದಾಂಡಿಗ ಮಾರ್ಕ್ ಸ್ಟೋನ್‌ಮ್ಯಾನ್ ಅವರು ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಪೈನ್‌ಗೆ ಕ್ಯಾಚ್ ನೀಡಿದರು. ಆಗ ತಂಡದ ಸ್ಕೋರ್ 28 ಆಗಿತ್ತು.

 ಎರಡನೇ ವಿಕೆಟ್‌ಗೆ ಕುಕ್ ಮತ್ತು ಜೇಮ್ಸ್ ವಿನ್ಸಿ ಅವರು 68 ರನ್‌ಗಳ ಕಾಣಿಕೆ ನೀಡಿದರು. ವಿನ್ಸಿ ಅವರು 25 ರನ್ ಗಳಿಸಿ ಔಟಾದರು. ತಂಡದ ಸ್ಕೋರ್ 95 ತಲುಪುವಾಗ ಇಂಗ್ಲೆಂಡ್‌ನ ಇನ್ನೊಂದು ವಿಕೆಟ್ ಉರುಳಿತು. ಕಳೆದ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಿದ್ದ ಕುಕ್ ಅವರನ್ನು ಹೇಝಲ್‌ವುಡ್ ಎಲ್‌ಬಿಡಬ್ಲು ಬಲಗೆ ಬೀಳಿಸಿದರು.ಕುಕ್ ಅವರು 39 ರನ್ ಗಳಿಸಿದರು. ಆಸ್ಟ್ರೇಲಿಯ ಐದು ಟೆಸ್ಟ್ ಗಳ ಸರಣಿಯಲ್ಲಿ 3-0 ಮುನ್ನಡೆಯೊಂದಿಗೆ ಈಗಾಗಲೇ ಸರಣಿಯನ್ನು ವಶಪಡಿಸಿಕೊಂಡಿದೆ. ನಾಲ್ಕನೇ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತ್ತು. ಐದನೇ ಟೆಸ್ಟ್‌ನ ಆರಂಭದಲ್ಲಿ ಆಟಕ್ಕೆ ಮಳೆ ಅಡ್ಡಿಪಡಿಸಿತ್ತು.

ಸಂಕ್ಷಿಪ್ತ ಸ್ಕೋರ್ ವಿವರ

►ಇಂಗ್ಲೆಂಡ್ ಮೊದಲ ಇನಿಂಗ್ಸ್ 81.4 ಓವರ್‌ಗಳಲ್ಲಿ 233/5( ಜೋ ರೂಟ್ 83, ಮಲಾನ್ ಔಟಾಗದೆ 55; ಹೇಝಲ್‌ವುಡ್ 47ಕ್ಕೆ 2, ಕಮಿನ್ಸ್ 44ಕ್ಕೆ 2).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News