×
Ad

ಅಯ್ಯಯ್ಯೋ ... ಈ ಭೂಮಿಯ ಮೇಲೆ ಇಂತಹ ಮಗನೂ ಇರಲು ಸಾಧ್ಯವೇ?

Update: 2018-01-05 20:28 IST

ರಾಜಕೋಟ್ , ಜ. 5 : ತಾಯಿಯನ್ನು ಸರಿಯಾಗಿ ನೋಡಿಕೊಳ್ಳದ ಅದೆಷ್ಟೋ ಗಂಡು ಮಕ್ಕಳಿದ್ದಾರೆ. ತಾಯಿ ಜೊತೆ ಜಗಳಾಡಿ ಆಕೆಯನ್ನು ಮನೆಯಿಂದಲೇ ಹೊರಹಾಕುವ ಕಟುಕ ಮಕ್ಕಳಿದ್ದಾರೆ. ಹೆತ್ತ ತಾಯಿಯನ್ನುವೃದ್ಧಾಶ್ರಮಕ್ಕೆ ಸೇರಿಸಿ ಬಿಡುವ ಹೃದಯ ಹೀನರನ್ನೂ ಬೇಕಾದಷ್ಟು ನಾವೆಲ್ಲಾ ನೋಡಿ ಮರುಗಿದ್ದೇವೆ. ಆದರೆ ಇದು.. ಊಹಿಸಲೂ ಸಾಧ್ಯವಿಲ್ಲದ ಕ್ರೌರ್ಯ .. ಯೋಚಿಸಿದರೆ ಮೈಯೆಲ್ಲಾ ನಡುಗುವ ದುಷ್ಟತನ .. ಕಲ್ಪಿಸಿಕೊಳ್ಳಲೂ ಅಸಹನೀಯವಾದ ಕ್ರೂರತನ... 

ಸೆಪ್ಟೆಂಬರ್ 27, 2017 ರಂದು ರಾಜಕೋಟ್ ನ ಗಾಂಧಿಗ್ರಾಮ್ ಪ್ರದೇಶದ ದರ್ಶನ ಅವೆನ್ಯೂ ನಿವಾಸಿ ಸಂದೀಪ್  ತನ್ನ ತಾಯಿ ತನ್ನ ಅಪಾರ್ಟ್ ಮೆಂಟ್ ನ ಟೆರೇಸ್ ನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ಕೊಡುತ್ತಾನೆ. ಪೊಲೀಸರು ಬಂದು ನೋಡಿ ಆತ್ಮಹತ್ಯೆ ಕೇಸು ದಾಖಲಿಸಿಕೊಳ್ಳುತ್ತಾರೆ. ಅಲ್ಲಿಗೆ ಕೇಸ್ ಮುಗಿಯಿತು... ಇಲ್ಲ .. ಮುಗಿಯಲಿಲ್ಲ . ಅದಾಗಿ ಕೆಲವು ಸಮಯದ ಬಳಿಕ ಪೊಲೀಸರಿಗೆ ಒಂದು ಅನಾಮಿಕ ಪತ್ರ ಬರುತ್ತದೆ. ಜೊತೆಗೊಂದು ವೀಡಿಯೊ. ಅದನ್ನು ನೋಡಿದ ಪೊಲೀಸರು ಬೆಚ್ಚಿ ಬೀಳುತ್ತಾರೆ. ಆ ಪರಮದುಷ್ಟ ಮಗ ಅದೂ ವೃತ್ತಿಯಲ್ಲಿ ಪ್ರಾಧ್ಯಾಪಕ ತನ್ನ ಹೆತ್ತಮ್ಮನನ್ನು ಕೈಯ್ಯಾರೆ ಹಿಡಿದು ಕಟ್ಟಡದ ಟೆರೇಸ್ ಗೆ ಕರೆದುಕೊಂಡು ಹೋಗಿ  ಅಲ್ಲಿಂದ ದೂಡಿ ಕೆಳಗೆ ಹಾಕಿದ್ದಾನೆ. ಆಕೆ ತಕ್ಷಣ ಪ್ರಾಣ ಬಿಟ್ಟಿದ್ದಾಳೆ ! 

ಇದನ್ನು ನಂಬಲು ಸಾಧ್ಯವೇ ? ಆದರೆ ಸಿಸಿಟಿವಿ ವೀಡಿಯೊ ನೋಡಿದ ಬಳಿಕ ನಂಬದೇ ಇರುವುದು ಅಸಾಧ್ಯ. ಏಕೆಂದರೆ ಸ್ವತಃ ಮಗನೇ ತಾಯಿಯನ್ನು ಟೆರೇಸ್ ಗೆ ಕೈ ಹಿಡಿದು ಕರೆದುಕೊಂಡು ಹೋಗುವ ದೃಶ್ಯಗಳು ಅಲ್ಲಿವೆ ! ಆತ್ಮಹತ್ಯೆ ಮಾಡಿಕೊಳ್ಳಲು ಹೋಗುವ , ಅದೂ ವೃದ್ಧ , ಕಾಯಿಲೆಪೀಡಿತ , ನಡೆಯಲು ಸಾಧ್ಯವಿಲ್ಲದ ಮಹಿಳೆ ೫ ಮಹಡಿ ಮೇಲೆ ಮಗನ ಜೊತೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆಯೇ ಎಂಬುದು ಪೋಲೀಸರ ಪ್ರಶ್ನೆ. 

ವಿಚಾರಣೆ ವೇಳೆ " ಆಕೆಯ ಕಾಯಿಲೆ ಪೀಡಿತ ಪರಿಸ್ಥಿತಿಯಿಂದ ತಾನು ಬೇಸತ್ತಿದ್ದೆ " ಎಂದು ಈಗ ಬಂಧನದಲ್ಲಿರುವ ಮಗ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 
 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News