ಮೇವು ಹಗರಣ: ಲಾಲೂ ಪ್ರಸಾದ್ ಯಾದವ್‌ಗೆ 3.5 ವರ್ಷ ಜೈಲು

Update: 2018-01-06 12:45 GMT

ರಾಂಚಿ, ಜ.6: ಬಹುಕೋಟಿ ಮೇವುಹಗರಣದ ಎರಡನೇ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್ ಯಾದವ್‌ಗೆ ವಿಶೇಷ ನ್ಯಾಯಾಲಯವು 3.5 ವರ್ಷಗಳ ಜೈಲುಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ರಾಂಚಿಯ ಬಿರ್ಸ ಮುಂಡ ಜೈಲಿನಲ್ಲಿರುವ ಲಾಲೂಪ್ರಸಾದ್ ಯಾದವ್‌ಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಶಿಕ್ಷೆಯ ಪ್ರಮಾಣನ್ನು ತಿಳಿಸಲಾಯಿತು. ದಿಯೊಗರ್ ಜಿಲ್ಲಾ ಖಜಾನೆಯಿಂದ ಕ್ರಿಮಿನಲ್ ಸಂಚು, ಫೋರ್ಜರಿ, ನಕಲಿ ದಾಖಲೆ ಬಳಸಿ ಅಕ್ರಮವಾಗಿ 84.5 ಲಕ್ಷ ರೂ. ಹಣವನ್ನು ಪಡೆದಿರುವ ಪ್ರಕರಣದಲ್ಲಿ ಲಾಲೂಪ್ರಸಾದ್ ದೋಷಿ ಎಂದು ಡಿ.23ರಂದು ನ್ಯಾಯಾಲಯ ತೀರ್ಪು ನೀಡಿತ್ತು. ಲಾಲೂಪ್ರಸಾದ್‌ಗೆ ಕಳೆದ ವಾರ ಶಿಕ್ಷೆಯ ಪ್ರಮಾಣ ಘೋಷಣೆಯಾಗುವ ನಿರೀಕ್ಷೆಯಿತ್ತು. ಆದರೆ ಬಳಿಕ ಎರಡು ಬಾರಿ ಮುಂದೂಡಲಾಗಿದೆ.

 ಶಿಕ್ಷೆಯ ಬಗ್ಗೆ ಟ್ವೀಟ್ ಮಾಡಿರುವ ಲಾಲೂಪ್ರಸಾದ್, ರಾಜಕೀಯ ದ್ವೇಷಸಾಧನೆಯ ಫಲವಾಗಿ ಈ ಶಿಕ್ಷೆ ವಿಧಿಸಲಾಗಿದೆ. ಅಸ್ಪಷ್ಟ, ಅರ್ಧ ಸುಳ್ಳನ್ನು ಪಕ್ಷಪಾತದಿಂದ ಕೂಡಿದ ಸಂಘಟಿತ ಪ್ರಚಾರದ ಮೂಲಕ ಸತ್ಯ ಎಂದು ಪ್ರತಿಬಿಂಬಿಸಲಾಗಿದೆ. ಏನು ಬೇಕಾದರೂ ಆಗಲಿ, ಆದರೆ ಪಕ್ಷಪಾತ ಮತ್ತು ದ್ವೇಷದ ಕಳಂಕ ಹೊಂದಿರುವ ಪದರವನ್ನು ಕಿತ್ತೊಗೆಯಲು ಸಾಧ್ಯವಿದೆ. ಅಂತಿಮವಾಗಿ ಸತ್ಯಕ್ಕೇ ಗೆಲುವಾಗಲಿದೆ ಎಂದು ತಿಳಿಸಿದ್ದಾರೆ.

1990ರಲ್ಲಿ ಲಾಲೂಪ್ರಸಾದ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೇವು ಹಗರಣ ನಡೆದಿತ್ತು. ಪಶುಗಳಿಗೆ ಮೇವು ಪೂರೈಸುವ ಸರಕಾರದ ಯೋಜನೆಯಡಿ 970 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಲಾಲೂಪ್ರಸಾದ್ ವಿರುದ್ಧ ಐದು ಪ್ರಕರಣ ದಾಖಲಿಸಲಾಗಿತ್ತು. ಇದರಲ್ಲಿ ಎರಡು ಪ್ರಕರಣಗಳ ವಿಚಾರಣೆ ನಡೆದು ಲಾಲೂಪ್ರಸಾದ್ ದೋಷಿ ಎಂದು ಸಾಬೀತಾಗಿದೆ. ಐದು ವರ್ಷದ ಹಿಂದೆ ತೀರ್ಪು ಹೊರಬಿದ್ದ ಮೊದಲನೇ ಪ್ರಕರಣದಲ್ಲಿ ಲಾಲೂಪ್ರಸಾದ್‌ಗೆ ಐದು ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು. ಎರಡು ತಿಂಗಳು ಜೈಲಿನಲ್ಲಿದ್ದ ಅವರು ಬಳಿಕ ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದಿದ್ದರು. ಪ್ರಕರಣದಲ್ಲಿ ಆರೋಪಿಗಳಾಗಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಹಾಗೂ ಇತರ ಐದು ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಪ್ರಕರಣದಲ್ಲಿ ಒಟ್ಟು 34 ಆರೋಪಿಗಳಿದ್ದರು. ಇವರಲ್ಲಿ ವಿಚಾರಣೆಯ ಅವಧಿಯಲ್ಲಿ 11 ಮಂದಿ ಮೃತರಾಗಿದ್ದರು. ಒಬ್ಬ ಆರೋಪಿ ಮಾಫಿ ಸಾಕ್ಷಿಯಾಗಿ ಬದಲಾಗಿದ್ದ. ಮೂವರು ಮಾಜಿ ಐಎಎಸ್ ಅಧಿಕಾರಿಗಳೂ ಸೇರಿದಂತೆ 15 ಮಂದಿಯ ಅಪರಾಧ ಸಾಬೀತಾಗಿದೆ.

2013ರಲ್ಲಿ ಲಾಲೂಗೆ ಜೈಲಿನಲ್ಲಿ ರಾಜಾತಿಥ್ಯ

2013ರಲ್ಲಿ ಜಾರ್ಖಂಡ್ ಜೈಲಿನಲ್ಲಿ ಸೆರೆವಾಸ ಅನುಭವಿಸಿದಾಗ ಲಾಲೂಪ್ರಸಾದ್ ಆಪ್ತಮಿತ್ರ ಹೇಮಂತ್ ಸೊರೆನ್ ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿದ್ದರು. ಆಗ ಜೈಲಿನಲ್ಲಿ ಲಾಲೂರನ್ನು ವಿಐಪಿಯಂತೆ ನಡೆದುಕೊಳ್ಳಲಾಗುತ್ತಿತ್ತು . ಅತಿಥಿಗೃಹವನ್ನು ಜೈಲಾಗಿ ಪರಿವರ್ತಿಸಲಾಗಿತ್ತು ಮತ್ತು ಮುಖ್ಯಮಂತ್ರಿ ಹೇಮಂತ್ ಸೊರೆನ್ ಲಾಲೂರನ್ನು ಭೇಟಿಯಾಗಲು ಖುದ್ದು ಜೈಲಿಗೆ ಬರುತ್ತಿದ್ದರು.

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಜಾರ್ಖಂಡ್‌ನಲ್ಲಿ ಬಿಜೆಪಿ ಸರಕಾರವಿದೆ. ತಾನೋರ್ವ ರಾಜಕೀಯ ಮುಖಂಡನಾಗಿರುವ ಕಾರಣ ತನ್ನನ್ನು ಭೇಟಿಯಾಗಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಜನರಿಗೆ ಭೇಟಿಗೆ ಅವಕಾಶ ಮಾಡಿಕೊಡಬೇಕೆಂಬ ಲಾಲೂಪ್ರಸಾದ್ ಮನವಿಯನ್ನು ಮುಖ್ಯಮಂತ್ರಿ ರಘುವರ್ ದಾಸ್ ತಳ್ಳಿಹಾಕಿದ್ದಾರೆ. ಆದರೆ ಲಾಲೂ ಅವರಿಗೆ ಜೈಲಿನಲ್ಲಿ ಟಿವಿ ಹಾಗೂ ದಿನಪತ್ರಿಕೆ ಒದಗಿಸಲಾಗಿದ್ದು, ಅವರ ಅಡುಗೆ ತಯಾರಿಸಲೆಂದೇ ಓರ್ವ ಅಡುಗೆಯಾಳನ್ನು ಪ್ರತ್ಯೇಕ ನೇಮಿಸಲಾಗಿದೆ.

ಜನತೆ ಲಾಲೂಜಿ ಪರವಿದ್ದಾರೆ: ತೇಜಸ್ವಿ ಯಾದವ್

ಶಿಕ್ಷೆ ಘೋಷಿಸಲ್ಪಟ್ಟ ಬಳಿಕ ಪಕ್ಷದ ಮುಖಂಡರ ಜೊತೆ ತುರ್ತು ಸಭೆ ನಡೆಸಿದ ಲಾಲೂಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್, ‘ನ್ಯಾಯಾಂಗ ತನ್ನ ಕರ್ತವ್ಯ ಪೂರೈಸಿದೆ. ಶಿಕ್ಷೆಯ ತೀರ್ಪನ್ನು ಅಧ್ಯಯನ ನಡೆಸಿದ ಬಳಿಕ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

 ಜನತೆ ಲಾಲೂಪ್ರಸಾದ್ ಪರವಿದ್ದಾರೆ. ಬಿಹಾರದ ಜನತೆಯಿಂದ ಆಯ್ಕೆಯಾದ ಲಾಲೂಜಿ ಈಗ ಜೈಲಿನಲ್ಲಿದ್ದಾರೆ . ಜನತೆಯಿಂದ ಆಯ್ಕೆಯಾಗದವರು ಈಗ ಸರಕಾರದಲ್ಲಿದ್ದಾರೆ ಎಂದು ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸಿದ ತೇಜಸ್ವಿ ಯಾದವ್, ಲಾಲೂಜಿ ಬಗ್ಗೆ ಅಮಿತ್‌ಶಾಗೆ ಭಯವಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News