×
Ad

ಕಮಲಾ ಮಿಲ್ಸ್ ಅಗ್ನಿ ದುರಂತ: ಮೋಜೊ ಬ್ರಿಸ್ಟೊ ಮಾಲಕರ ವಿರುದ್ಧ ದೂರು

Update: 2018-01-06 18:27 IST

ಮುಂಬೈ, ಜ.6: ಇಲ್ಲಿನ ಕಮಲಾ ಮಿಲ್ಸ್ ಅಗ್ನಿ ದುರಂತದ ಆರೋಪಿಗಳ ಪಟ್ಟಿಯಲ್ಲಿ ಮೊಜೊ ಬ್ರಿಸ್ಟೊ ರೆಸ್ಟೊರೆಂಟ್‌ನ ಮಾಲಕರ ಹೆಸರುಗಳನ್ನು ಕೂಡಾ ಸೇರಿಸಲಾಗಿದ್ದು, ಅವರ ವಿರುದ್ಧ ದೋಷಯುಕ್ತ ನರಹತ್ಯೆ ದೂರು ದಾಖಲಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಮಲಾ ಮಿಲ್ಸ್ ಅಗ್ನಿದುರಂತ ತನಿಖೆ ನಡೆಸಿದ ಮುಂಬೈ ಅಗ್ನಿಶಾಮಕ ದಳದ ಪ್ರಾಥಮಿಕ ವರದಿಯು ಶುಕ್ರವಾರದಂದು ಬಿಡುಗಡೆಯಾಗಿದ್ದು ಮೊಜೊ ಬ್ರಿಸ್ಟೊದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಹುಕ್ಕಾ ಬಾರ್‌ನಿಂದ ಹಾರಿದ ಕಿಡಿಯಿಂದಾಗಿ ಈ ದುರಂತ ಸಂಭವಿಸಿರಬಹುದು ಎಂದು ತಿಳಿಸಲಾಗಿದೆ. ಮೊಜೊ ಬ್ರಿಸ್ಟೊ ದಲ್ಲಿ ಹೊತ್ತಿದ ಕಿಡಿಯು ನಂತರ ಕಟ್ಟಡದ ಮೇಲ್ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ವನ್ ಎಬೌ ರೆಸ್ಟೊರೆಂಟ್‌ಗೂ ಹಬ್ಬಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಬಹುತೇಕ ಸಂತ್ರಸ್ತರು ಶೌಚಾಲಯದಲ್ಲಿ ರಕ್ಷಣೆಗಾಗಿ ಅಡಗಿ ಕುಳಿತ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಈ ಹಿಂದೆ ಪೊಲೀಸರು ತಿಳಿಸಿದ್ದರು.

 ಸಾಕ್ಷಿದಾರರ ಪ್ರಕಾರ ಘಟನೆ ನಡೆದ ಸಮಯದಲ್ಲಿ ಮೊಜೊ ಬ್ಟಿಸ್ಟೊದಲ್ಲಿ ಹುಕ್ಕಾ ಸೇದಲಾಗುತ್ತಿತ್ತು. ಹುಕ್ಕಾ ಉರಿಸಲು ಒಲೆಯಿಂದ ಕೆಂಡ ತೆಗೆದು ಅದನ್ನು ಹುಕ್ಕಾದೊಳಗೆ ಹಾಕುವ ಸಂದರ್ಭದಲ್ಲಿ ಅಥವಾ ಹುಕ್ಕಾಗೆ ಗಾಳಿ ಹಾಕುವ ಸಮಯದಲ್ಲಿ ಅದರಿಂದ ಹಾರಿದ ಕಿಡಿಯು ಉರಿಯುವ ವಸ್ತುಗಳ ಮೇಲೆ ಬಿದ್ದು ಬೆಂಕಿ ಹಚ್ಚಿಕೊಂಡಿರುವ ಎಲ್ಲ ಸಾಧ್ಯತೆಗಳೂ ಇವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News