ತಮಿಳುನಾಡು ಸಾರಿಗೆ ಕಾರ್ಮಿಕರ ಮುಷ್ಕರ ಮುಂದುವರಿಕೆ: ರಸ್ತೆಗಿಳಿಯದ 14,000 ಬಸ್‌ಗಳು

Update: 2018-01-06 15:46 GMT

 ಚೆನ್ನೈ,ಜ.6: ವೇತನ ಹೆಚ್ಚಳದ ಬೇಡಿಕೆಯೊಂದಿಗೆ ಸಾರಿಗೆ ನೌಕರರ ಯೂನಿಯನ್‌ಗಳು ಕರೆ ನೀಡಿರುವ ಮುಷ್ಕರವು ಮೂರನೇ ದಿನವಾದ ಶನಿವಾರವೂ ಮುಂದುವರಿದಿದ್ದು, ಸುಮಾರು 14,000 ಬಸ್‌ಗಳು ರಸ್ತೆಗಿಳಿದಿಲ್ಲ. ಇದರಿಂದಾಗಿ ಜನರು ಪರದಾಡುವಂತಾಗಿದೆ. ಆಟೋಗಳು ಮತ್ತು ಕ್ಯಾಬ್‌ಗಳಿಗೆ ದುಬಾರಿ ಬಾಡಿಗೆಯನ್ನು ತೆತ್ತು ಅಥವಾ ನಡೆದುಕೊಂಡೇ ಹೋಗಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿ ದ್ದಾರೆ. ಶುಕ್ರವಾರ ಚೆನ್ನೈ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಕೇವಲ ಮೂರನೇ ಒಂದು ಭಾಗದಷ್ಟು ಬಸ್ಸುಗಳು ಮಾತ್ರ ಕಾರ್ಯಾಚರಿಸಿದ್ದರಿಂದ ಸಾವಿರಾರು ಪ್ರಯಾಣಿಕರು ನಿಲ್ದಾಣಗಳಲ್ಲಿಯೇ ಬಾಕಿಯಾಗಿದ್ದರು.

ಸಾರಿಗೆ ಸಚಿವರೊಂದಿಗಿನ ಮಾತುಕತೆಗಳು ವಿಫಲಗೊಂಡ ಬಳಿಕ 12 ಕಾರ್ಮಿಕ ಯೂನಿಯನ್‌ಗಳು ಮುಷ್ಕರಕ್ಕೆ ಕರೆ ನೀಡಿದ್ದವು. ಮುಷ್ಕರವನ್ನು ರದ್ದುಗೊಳಿಸಿ ಕರ್ತವ್ಯಕ್ಕೆ ಮರಳುವಂತೆ ಕಾರ್ಮಿಕರಿಗೆ ಸೂಚಿಸಿರುವ ಮದ್ರಾಸ ಉಚ್ಚ ನ್ಯಾಯಾಲಯವು, ಇಲ್ಲದಿದ್ದರೆ ಅಮಾನತು ಮತ್ತು ವಜಾ ಸೇರಿದಂತೆ ಪರಿಣಾಮಗಳನ್ನು ಎದುರಿಸುವಂತೆ ಎಚ್ಚರಿಕೆ ನೀಡಿದೆ. ಆದರೆ, ನ್ಯಾಯಾಲಯದ ಆದೇಶವನ್ನು ಖುದ್ದಾಗಿ ನೋಡಿದ ಮೇಲೆ ಮುಷ್ಕರವನ್ನು ನಿಲ್ಲಿಸುವುದಾಗಿ ಯೂನಿಯನ್‌ಗಳು ಹೇಳಿವೆ.

ಸಾರಿಗೆ ಸಚಿವ ಎಂ.ಆರ್.ವಿಜಯ ಭಾಸ್ಕರ್ ಅವರು ಕರ್ತವ್ಯಕ್ಕೆ ಮರಳುವಂತೆ ಕಾರ್ಮಿಕರನ್ನು ಕೋರಿಕೊಂಡಿದ್ದರಾದರೂ ವೇತನ ಪರಿಷ್ಕರಣೆಯ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

ರಾಜ್ಯದ ಸಾರಿಗೆ ಇಲಾಖೆಯು 22,500 ಬಸ್‌ಗಳನ್ನು ಮತ್ತು 1.4 ಲ.ಕಾರ್ಮಿಕರನ್ನು ಹೊಂದಿದೆ. ಇತರ ರಾಜ್ಯಗಳ ಸಾರಿಗೆ ನಿಗಮಗಳ ನೌಕರರಿಗೆ ಸಮನಾದ ವೇತನ ನೀಡುವಂತೆ ಕಾರ್ಮಿಕರು ಆಗ್ರಹಿಸುತ್ತಿದ್ದಾರೆ. ಶೇ.2.57ರಷ್ಟು ಏರಿಕೆಯನ್ನು ಯೂನಿಯನ್ ಗಳು ಕೇಳಿದ್ದರೆ, ಸರಕಾರವು ಶೇ.2.44 ಏರಿಕೆಗೆ ಒಪ್ಪಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News