ಕೋರೆಗಾಂವ್ ಹಿಂಸಾಚಾರಕ್ಕೆ ಜಿಗ್ನೇಶ್ ಮೆವಾನಿ ಜವಾಬ್ದಾರರಲ್ಲ: ಕೇಂದ್ರ ಸಚಿವ ಅಠಾವಳೆ

Update: 2018-01-06 16:29 GMT

ಮುಂಬೈ, ಜ.6: ಜನವರಿ ಒಂದರಂದು ನಡೆದ ಭೀಮ ಕೋರೆಗಾಂವ್ ಹಿಂಸಾಚಾರದ ಹಿನ್ನೆಲೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ದಲಿತ ನಾಯಕ ಮತ್ತು ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ವಿರುದ್ಧ ಪುಣೆ ಪೊಲೀಸರು ದೂರು ದಾಖಲಿಸಿದ್ದಾರೆ. ಆದರೆ ಈ ಹಿಂಸಾಚಾರಕ್ಕೆ ಮೆವಾನಿ ಜವಾಬ್ದಾರರಲ್ಲ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ತಿಳಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಹಿರಿಯ ದಲಿತ ನಾಯಕ ಅಠಾವಳೆ, ಜನವರಿ ಒಂದರಂದು ಭೀಮಾ ಕೊರೆಗಾಂವ್ ಯುದ್ಧದ 200ನೇ ವರ್ಷಾಚರಣೆಯನ್ನು ನಡೆಸುವ ಮೊದಲೇ ಪ್ರದೇಶದಲ್ಲಿ ಉದ್ವಿಗ್ನತೆ ಮನೆ ಮಾಡಿತ್ತು ಎಂದು ತಿಳಿಸಿದ್ದಾರೆ. ಜನವರಿ ಒಂದರಂದು ಭೀಮಾ ಕೋರೆಗಾಂವ್‌ನಲ್ಲಿರುವ ಯುದ್ಧ ಸ್ಮಾರಕದ ಬಳಿಗೆ ತೆರಳುತ್ತಿದ್ದ ದಲಿತರ ಮೇಲೆ ದಾಳಿ ನಡೆಸಲಾಗಿತ್ತು. ದಲಿತ ನಾಯಕರು ಈ ದಾಳಿಯನ್ನು ಸಂಘ ಪರಿವಾರ ನಡೆಸಿವೆ ಎಂದು ಆರೋಪಿಸಿದರೆ ಸಂಘಪರಿವಾರ ಈ ಹಿಂಸಾಚಾರ ಭುಗಿಲೇಳಲು ಜಿಗ್ನೇಶ್ ಮೆವಾನಿ ಒಂದು ದಿನ ಮೊದಲು ಮಾಡಿದ್ದ ಪ್ರಚೋದನಕಾರಿ ಭಾಷಣವೇ ಕಾರಣ ಎಂದು ಆರೋಪಿಸಿತ್ತು.

“ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಜಿಗ್ನೇಶ್ ಮೆವಾನಿ ಜವಾಬ್ದಾರರಲ್ಲ. ಆ ಪ್ರದೇಶದಲ್ಲಿ ಅದಕ್ಕೂ ಮೊದಲೇ ಉದ್ವಿಗ್ನತೆಯಿತ್ತು. ನಾನು ಸ್ಥಳಕ್ಕೆ ಭೇಟಿ ನೀಡಿದಾಗ ಪರಿಸ್ಥಿತಿ ಶಾಂತವಾಗಿತ್ತು. ಹಾಗಾಗಿ ನಾನು ಡಿಸೆಂಬರ್ 31ರಂದು ದಿಲ್ಲಿಗೆ ಮರಳಿದೆ. ಅದೇ ದಿನ ಮೆವಾನಿ ಭಾಷಣ ಮಾಡಿದ್ದರು. ಅವರು ಭೀಮ ಕೋರೆಗಾಂವ್ ಗೆ ಭೇಟಿ ನೀಡಿರಲಿಲ್ಲ. ಕೆಲವು ಗುಂಪುಗಳು ರಾತ್ರಿಯ ವೇಳೆ ಸಭೆ ನಡೆಸಿದೆ ಮತ್ತು ಜನವರಿ ಒಂದರಂದು ಹಿಂಸಾಚಾರ ಭುಗಿಲೆದ್ದಿದೆ” ಎಂದು ಅಠಾವಳೆ ತಿಳಿಸಿದ್ದಾರೆ.

“ಜಿಗ್ನೇಶ್ ಚುನಾವಣೆಯನ್ನು ಗೆದ್ದಾಗ ನಾನು ಅವರನ್ನು ಅಭಿನಂದಿಸಿದ್ದೆ. ಹೊಸ ದಲಿತ ಮುಖವೊಂದು ಸೃಷ್ಟಿಯಾಗಿರುವುದು ಸಂತೋಷದ ವಿಷಯ. ನಾನು ಅವರಿಗೆ ನೀಡುವ ಸಲಹೆಯೆಂದರೆ ಅವರು ಸಮಾಜವನ್ನು ಒಟ್ಟುಗೂಡಿಸುವ ಕಾರ್ಯ ಮಾಡಬೇಕೇ ಹೊರತು ಅದನ್ನು ಒಡೆಯಬಾರದು” ಎಂದು ಭಾರತೀಯ ಪ್ರಜಾಸತಾತ್ಮಕ ಪಕ್ಷದ ಮುಖ್ಯಸ್ಥರಾದ ಅಠವಳೆ ತಿಳಿಸಿದ್ದಾರೆ.

ಜನವರಿ ಒಂದರ ದಲಿತ ವಿರೋಧಿ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ ನೀಡಬೇಕು ಎಂಬ ಮೆವಾನಿಯ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಅಠಾವಳೆ, ಎಲ್ಲ ವಿದ್ಯಾಮಾನಗಳ ಬಗ್ಗೆ ಪ್ರಧಾನಿಯವರು ಹೇಳಿಕೆ ನೀಡುವ ಅಗತ್ಯವಿಲ್ಲ. ಉನಾದಲ್ಲಿ ಗೋರಕ್ಷಕರ ಕೈಯಲ್ಲಿ ದಲಿತರು ಹಲ್ಲೆಗೊಳಗಾದಾಗ ಅವರು ಈ ಘಟನೆಯನ್ನು ಖಂಡಿಸಿದ್ದರು ಎಂದು ತಿಳಿಸಿದರು.

ಜನವರಿ ಒಂದರಂದು ಹಿಂಸಾಚಾರ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಘಟನೆಯಲ್ಲಿ ಆಸ್ತಿಪಾಸ್ತಿಗೆ ಹಾನಿಯುಂಟಾಗಿದ್ದಲ್ಲಿ ಅದಕ್ಕೆ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಫಡ್ನವೀಸ್ ಭರವಸೆ ನೀಡಿರುವುದಾಗಿ ಅಠಾವಳೆ ತಿಳಿಸಿದರು. ಜನವರಿ 13ರಂದು ಪುಣೆಯಲ್ಲಿ ಸಾಮಾಜಿಕ ಸೌಹಾರ್ದ ಸಮಾವೇಶವನ್ನು ನಡೆಸುವುದಾಗಿ ಅವರು ತಿಳಿಸಿದರು.

ದಲಿತರು ಒಂದಾದಾಗ ಮಾತ್ರ ನಾವು ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಬೇಕೇ ಅಥವಾ ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕೇ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಠಾವಳೆ ತಿಳಿಸಿದರು.

ಡಿಸೆಂಬರ್ 31ರಂದು ಭೀಮ ಕೋರೆಗಾಂವ್ ಯುದ್ಧದ 200ನೇ ವರ್ಷದ ಪ್ರಯುಕ್ತ ಆಯೋಜಿಸಲಾಗಿದ್ದ ಎಲ್ಗರ್ ಪರಿಷದ್ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದಲ್ಲಿ ಜಿಗ್ನೇಶ್ ಮೆವಾನಿ ಮತ್ತು ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಉಮರ್ ಖಾಲಿದ್ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News