ಪಾಕ್‌ಗೆ ಎಲ್ಲ ನೆರವು ರದ್ದುಪಡಿಸುವ ಶಾಸನಕ್ಕೆ ಟ್ರಂಪ್ ಬೆಂಬಲ

Update: 2018-01-06 16:43 GMT

ವಾಶಿಂಗ್ಟನ್, ಜ. 6: ಭಯೋತ್ಪಾದಕರ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ಪದೇ ಪದೇ ನಿರಾಕರಿಸುತ್ತಿರುವ ಪಾಕಿಸ್ತಾನಕ್ಕೆ ನೀಡುವ ಎಲ್ಲ ನೆರವನ್ನು ರದ್ದುಪಡಿಸುವ ಶಾಸನವೊಂದನ್ನು ಮಂಡಿಸುವ ರಿಪಬ್ಲಿಕನ್ ಸೆನೆಟರ್ ಒಬ್ಬರ ಪ್ರಸ್ತಾಪಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗ ಬೆಂಬಲ ನೀಡಿದ್ದಾರೆ.

ಭದ್ರತಾ ನೆರವಿನ ರೂಪದಲ್ಲಿ ಪಾಕಿಸ್ತಾನಕ್ಕೆ ನೀಡಬೇಕಾಗಿದ್ದ ಸುಮಾರು 2 ಬಿಲಿಯ ಡಾಲರ್ (ಸುಮಾರು 12,650 ಕೋಟಿ ರೂಪಾಯಿ) ಮೊತ್ತವನ್ನು ಅಮೆರಿಕ ಸರಕಾರ ತಡೆ ಹಿಡಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

2002ರ ಬಳಿಕ ಅಮೆರಿಕ ಪಾಕಿಸ್ತಾನಕ್ಕೆ ಸುಮಾರು 33 ಬಿಲಿಯ ಡಾಲರ್ (ಸುಮಾರು 2.09 ಲಕ್ಷ ಕೋಟಿ ರೂಪಾಯಿ) ನೆರವನ್ನು ನೀಡಿದೆ.

‘‘ಪಾಕಿಸ್ತಾನಕ್ಕೆ ನೆರವು ನೀಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸುವ ಮಸೂದೆಯೊಂದನ್ನು ಮುಂದಿನ ದಿನಗಳಲ್ಲಿ ನಾನು ಮಂಡಿಸುತ್ತೇನೆ. ಪಾಕಿಸ್ತಾನಕ್ಕೆ ಹೋಗಬಹುದಾಗಿದ್ದ ಹಣವನ್ನು ನನ್ನ ಮಸೂದೆಯು ಪಡೆದುಕೊಂಡು ಇಲ್ಲಿ ನಮ್ಮ ದೇಶದಲ್ಲಿ ರಸ್ತೆಗಳು ಮತ್ತು ಸೇತುವೆಗಳನ್ನು ನಿರ್ಮಿಸುವ ಮೂಲಸೌಕರ್ಯ ನಿಧಿಯೊಂದಕ್ಕೆ ವರ್ಗಾಯಿಸುತ್ತದೆ’’ ಎಂಬುದಾಗಿ ಕೆಂಟಕಿಯ ರಿಪಬ್ಲಿಕನ್ ಸೆನೆಟರ್ ರ್ಯಾಂಡ್ ಪೌಲ್ ತನ್ನ ಟ್ವಿಟರ್ ಖಾತೆಯಲ್ಲಿ ಬರೆದಿದ್ದರು.

ಶುಕ್ರವಾರ ರಾತ್ರಿ ಈ ಟ್ವೀಟನ್ನು ರೀಟ್ವೀಟ್ ಮಾಡಿರುವ ಟ್ರಂಪ್, ‘‘ಉತ್ತಮ ಯೋಚನೆ ರ್ಯಾಂಡ್’’ ಎಂಬುದಾಗಿ ಟ್ವೀಟ್ ಮಾಡಿದ್ದಾರೆ.

ಭದ್ರತಾ ನೆರವಲ್ಲದೆ ಪಾಕಿಸ್ತಾನಕ್ಕೆ ನೀಡುವ ಎಲ್ಲ ರೀತಿಯ ನೆರವುಗಳನ್ನು ನಿಲ್ಲಿಸಬೇಕೆಂದು ರ್ಯಾಂಡ್ ಪೌಲ್‌ರ ಮಸೂದೆ ಒತ್ತಾಯಿಸುತ್ತದೆ.

ಪಾಕ್ ಪ್ರತೀಕಾರವನ್ನು ನಿಭಾಯಿಸಲು ಸಿದ್ಧ: ಅಮೆರಿಕ

ಪಾಕಿಸ್ತಾನಕ್ಕೆ ನೀಡಬೇಕಾಗಿರುವ ಸೇನಾ ನೆರವನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ, ಆ ದೇಶ ತೆಗೆದುಕೊಳ್ಳಬಹುದಾದ ಯಾವುದೇ ಪ್ರತೀಕಾರಾತ್ಮಕ ಕ್ರಮಗಳ ಪರಿಣಾಮಗಳನ್ನು ಸೀಮಿತಗೊಳಿಸುವ ವಿಧಾನಗಳ ಬಗ್ಗೆ ಅಮೆರಿಕ ಪರಿಶೀಲನೆ ನಡೆಸುತ್ತಿದೆ.

ಅಫ್ಘಾನಿಸ್ತಾನದಲ್ಲಿ 16 ವರ್ಷಗಳಿಂದ ಯುದ್ಧ ನಡೆಸುತ್ತಿರುವ ಅಮೆರಿಕದ ಸೈನಿಕರಿಗೆ ಈಗ ಪಾಕಿಸ್ತಾನದ ಮೂಲಕವೇ ಸಾಮಗ್ರಿಗಳನ್ನು ಸಾಗಿಸಲಾಗುತ್ತಿದೆ.

ಅಮೆರಿಕದ ಸೇನಾ ಸಾಮಗ್ರಿಗಳ ಸಾಗಾಟಕ್ಕೆ ತನ್ನ ವಾಯುಪ್ರದೇಶ ಅಥವಾ ರಸ್ತೆಗಳನ್ನು ಮುಚ್ಚುವ ಇಂಗಿತವನ್ನು ಈವರೆಗೆ ಪಾಕಿಸ್ತಾನ ವ್ಯಕ್ತಪಡಿಸಿಲ್ಲ ಎಂದು ಅಮೆರಿಕ ರಕ್ಷಣಾ ಇಲಾಖೆ ಪೆಂಟಗನ್ ತಿಳಿಸಿದೆ.

ಇಂಥ ಸಾಧ್ಯತೆಗಳನ್ನು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಶುಕ್ರವಾರ ತಳ್ಳಿಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News