×
Ad

ರೇಷನ್ ಬೇಕಾದಲ್ಲಿ ಲಸಿಕೆ ಕಡ್ಡಾಯ!

Update: 2018-01-07 09:45 IST

ಬಿಜನೂರು, ಜ.7: ಉತ್ತರ ಪ್ರದೇಶದಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಅಲ್ಲಿನ ಆರೋಗ್ಯ ಇಲಾಖೆ ಹೊಸ ನಿಯಮಾವಳಿಯೊಂದನ್ನು ಜಾರಿಗೆ ತಂದಿದೆ. ಹೊಸ ನಿಯಮಾವಳಿಯ ಅನ್ವಯ, ಯಾವುದೇ ಕುಟುಂಬಗಳು ಪಡಿತರ ಸೌಲಭ್ಯ ಪಡೆಯಬೇಕಿದ್ದರೆ, ಮನೆಯಲ್ಲಿರುವ ಐದು ವರ್ಷಕ್ಕಿಂತ ಕೆಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸಿರುವುದು ಕಡ್ಡಾಯ.

ಅಲ್ಪಸಂಖ್ಯಾತರ ಪ್ರಾಬಲ್ಯ ಇರುವ ಬಿಜನೂರು ತಾಲೂಕಿನಲ್ಲಿ ಈ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಲಸಿಕೆಯನ್ನು ವಿರೋಧಿಸುವ ಸಮುದಾಯಗಳ ಮೇಲೆ ಒತ್ತಡ ತರುವ ಕ್ರಮವಾಗಿ ಇದನ್ನು ಜಾರಿಗೊಳಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಲ್ಲೆಯ ಮತ್ತೊಂದು ತಾಲೂಕಿನಲ್ಲಿ ಈ ಕ್ರಮ ಕೈಗೊಂಡ ಬಳಿಕ ಲಸಿಕೆ ಹಾಕಿಸುವಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಕೊತ್ವಾಲಿ ದೇವತ್ ತಾಲೂಕಿನಲ್ಲಿ ಹಲವು ಮಂದಿ ಲಸಿಕೆ ವಿರೋಧಿಸುತ್ತಾರೆ. ಈ ಮೂಲಕ ಮಕ್ಕಳ ಬಾಳಿನ ಜತೆ ಚೆಲ್ಲಾಟವಾಡುತ್ತಿದ್ದಾರೆ. ಜಾಗೃತಿಯ ಕೊರತೆ ಇದಕ್ಕೆ ಕಾರಣ. ಇದೀಗ ಆರೋಗ್ಯ ಇಲಾಖೆ ಜಿಲ್ಲಾ ಪೂರೈಕೆ ಅಧಿಕಾರಿಯ ಸಹಕಾರ ಪಡೆದು ಇಂಥ ವ್ಯಕ್ತಿಗಳ ಮೇಲೆ ಒತ್ತಡ ತರಲು ಮುಂದಾಗಿದೆ. ಲಸಿಕಾ ಅಭಿಯಾನವನ್ನು ಯಾರಾದರೂ ವಿರೋಧಿಸಿದರೆ ಅವರಿಗೆ ಪಡಿತರ ವಿತರಿಸುವುದಿಲ್ಲ ಎಂದು ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.

ದೇಹತ್ ತಾಲೂಕು ಹೆಚ್ಚುವರಿ ವೈದ್ಯಕೀಯ ಅಧಿಕಾರಿ ಇದನ್ನು ದೃಢಪಡಿಸಿದ್ದಾರೆ. ಎಲ್ಲೆಡೆ ಲಸಿಕಾ ಅಭಿಯಾನ ನಡೆದಿದೆ. ಇದಕ್ಕೆ ಕೆಲವೆಡೆ ವಿರೋಧ ವ್ಯಕ್ತವಾಗುತ್ತಿದೆ. ಇದನ್ನು ತಪ್ಪಿಸಲು ಈ ಕ್ರಮ ಅನಿವಾರ್ಯ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News