​ಲಾಲೂ ಮಕ್ಕಳಿಗೆ ಬೇನಾಮಿ ಕಂಟಕ

Update: 2018-01-07 04:55 GMT

ಹೊಸದಿಲ್ಲಿ, ಜ.7: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಮತ್ತೊಂದು ಮೇವು ಹಗರಣದಲ್ಲಿ ಶಿಕ್ಷೆಯಾದ ಬೆನ್ನಲ್ಲೇ ಅವರ ಪುತ್ರರಿಗೆ ಕೂಡಾ ಬೇನಾಮಿ ಆಸ್ತಿ ಪ್ರಕರಣ ಕಂಟಕವಾಗುವ ಸಾಧ್ಯತೆಯಿದೆ. ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಲಾಲೂ ಅವರ ಇಬ್ಬರು ಪುತ್ರಿಯರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.

ಬೇನಾಮಿ ವಹಿವಾಟು (ನಿಷೇಧ) ಕಾಯ್ದೆ ಅನ್ವಯ 40 ಕೋಟಿ ರೂಪಾಯಿ ಲೆಕ್ಕಕ್ಕೆ ಸಿಗದ ಹಣದಿಂದ ಬೇನಾಮಿ ಆಸ್ತಿ ಖರೀದಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಹೇಳಿವೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈಗಾಗಲೇ ಇದನ್ನು ವಶಕ್ಕೆ ಪಡೆದಿದ್ದು, ಕಾನೂನಾತ್ಮಕ ಸಲಹೆ ಪಡೆದ ಬಳಿಕ ಇದನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದೆ. ಬೇನಾಮಿ ಕಾಯ್ದೆಯಡಿ ಶಿಕ್ಷೆಗೆ ಒಳಗಾದರೆ, ಆರೋಪಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲು ಮತ್ತು ಆಸ್ತಿಯ ಮೌಲ್ಯದ ಶೇಕಡ 25ನ್ನು ದಂಡವಾಗಿ ವಿಧಿಸಲು ಅವಕಾಶ ಇರುತ್ತದೆ. ತಪ್ಪಿತಸ್ಥ ರಾಜಕಾರಣಿಯನ್ನು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಲಾಗುತ್ತದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ 40 ಕೋಟಿ ರೂ. ಮೌಲ್ಯದ ಆಸ್ತಿಯನ್ನು 2007ರಲ್ಲಿ ಖರೀದಿಸಲಾಗಿತ್ತು. ಆಗ ಲಾಲೂ ಕೇಂದ್ರ ರೈಲ್ವೆ ಸಚಿವರಾಗಿದ್ದರು. ಎ.ಬಿ. ಎಕ್ಸ್‌ಪೋರ್ಟ್ ಹೆಸರಿನಲ್ಲಿ ಇದನ್ನು ಖರೀದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News