ಬಶೀರ್ ಮೇಲೆ ದುಷ್ಕರ್ಮಿಗಳ ದಾಳಿ ಪ್ರಕರಣ: ಪಬ್ಲಿಕ್ ಟಿವಿ ಹೇಳಿದ್ದೇನು?, ನಿಜವಾಗಿ ನಡೆದದ್ದೇನು?

Update: 2018-01-07 15:41 GMT

ಮಂಗಳೂರು, ಜ.7: ಕೊಟ್ಟಾರಚೌಕಿಯಲ್ಲಿ ದುಷ್ಕರ್ಮಿಗಳ ದಾಳಿಗೊಳಗಾದ ಬಶೀರ್ ಅವರು ಇಂದು ಮೃತಪಟ್ಟಿದ್ದು, ಅವರ ಅಂತ್ಯಸಂಸ್ಕಾರ ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿಯ ದಫನ ಭೂಮಿಯಲ್ಲಿ ನಡೆದಿದೆ.

ಬಶೀರ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸುತ್ತಿದ್ದಂತೆ ನೂರಾರು ಜನರು ಎಜೆ ಆಸ್ಪತ್ರೆಯ ಬಳಿ ಜಮಾಯಿಸಿದ್ದಾರೆ. ಈ ಸಂದರ್ಭ ಬಶೀರ್ ನಿಧನದ ಬಗ್ಗೆ ವರದಿ ಮಾಡಲು ಪತ್ರಕರ್ತರೂ ಆಗಮಿಸಿದ್ದಾರೆ. ಆದರೆ ಸ್ಥಳಕ್ಕೆ ಹೋಗಿದ್ದ ಖಾಸಗಿ ಚಾನೆಲ್ ‘ಪಬ್ಲಿಕ್ ಟಿವಿ’ಯ ವರದಿಗಾರನಿಗೆ ಛೀಮಾರಿ ಹಾಕಿದ ಜನರು ‘ಪಬ್ಲಿಕ್ ಟಿವಿಗೆ ಧಿಕ್ಕಾರ’ ಎಂದು ಘೋಷಣೆಗಳನ್ನು ಕೂಗಿ ವರದಿಗಾರರನ್ನು ಹಿಂದಕ್ಕೆ ಕಳುಹಿಸಿದ್ದರು.

ಜನರ ಆಕ್ರೋಶಕ್ಕೆ ಕಾರಣ  ಬಶೀರ್ ನಿಧನದ ಬಗ್ಗೆ ಪಬ್ಲಿಕ್ ಟಿವಿ ನೀಡಿದ ವರದಿ . ದುಷ್ಕರ್ಮಿಗಳಿಂದ ಬರ್ಬರ  ದಾಳಿಗೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಬಶೀರ್ ಮೃತಪಟ್ಟ ಸುದ್ದಿಯನ್ನು ಪಬ್ಲಿಕ್ ಟಿವಿ ಸುಳ್ಳು ಹಾಗು ಮಸಾಲೆ ಸೇರಿಸಿ  ವರದಿ ಮಾಡಿತ್ತು. 

ಆ ವರದಿಯಲ್ಲಿ ಪಬ್ಲಿಕ್ ಟಿವಿ ನಿರೂಪಕ ಹೇಳಿದ್ದು: 

“ಡೆಡ್ಲಿ ಅಟ್ಯಾಕ್ ನಲ್ಲಿ ಗಂಟಲು ಮತ್ತು ಎದೆಯ ಭಾಗಕ್ಕೆ ತೀವ್ರವಾಗಿ ಗಾಯಗೊಂಡಿದ್ದರು. ಬಶೀರ್ ರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. 4 ದಿನಗಳ ಜೀವನ್ಮರಣದ ಹೋರಾಟದ ಬಳಿಕ ಕೊನೆಗೂ ಬದುಕುಳಿಯಲಿಲ್ಲ ಬಶೀರ್. ಕಾಟಿಪಳ್ಳದಲ್ಲಿ ದೀಪಕ್ ರಾವ್ ಕೊಲೆಯಾದಂತಹ ಸಂದರ್ಭದಲ್ಲಿ ಗುಂಪು ಘರ್ಷಣೆ ಸಂಭವಿಸಿದ್ದು, ಈ ಸಂದರ್ಭದಲ್ಲಿ ಎರಡೂ ಕೋಮಿನವರು ಕೂಡ ತಲವಾರುಗಳಿಂದ ಪರಸ್ಪರ ದಾಳಿ ಮಾಡಿದ್ದರು. ದಾಳಿಯ ದೃಶ್ಯ ಕೂಡ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಶೀರ್ ಎದೆ ಮತ್ತು ಗಂಟಲಿಗೆ ತೀವ್ರ ಗಾಯಗಳಾಗಿತ್ತು. ಅದೇ ದಿನ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇಂದು ಮೃತಪಟ್ಟಿದ್ದಾರೆ. ದೀಪಕ್ ರಾವ್ ಕೊಲೆ ನಡೆದ ಸಂದರ್ಭ ಎರಡೂ ಕೋಮಿನ ಹುಡುಗರು ಪರಸ್ಪರ ಹೊಡೆದಾಡಿಕೊಂಡಿದ್ದರು. ಲಾಂಗ್ ತಲವಾರುಗಳಲ್ಲಿ ಅಟ್ಯಾಕ್ ಮಾಡಲಾಗಿತ್ತು. ಈ ಅಟ್ಯಾಕ್ ನಲ್ಲಿ ಗಾಯಗೊಂಡಿದ್ದ ಬಶೀರ್ ಇಂದು ಮೃತಪಟ್ಟಿದ್ದಾರೆ…………” ಹೀಗೆ ಸಾಗುತ್ತದೆ ಪಬ್ಲಿಕ್ ಟಿವಿ ಆ್ಯಂಕರ್ ನ ಸ್ಪೆಷಲ್ ನ್ಯೂಸ್.

ಕಾಟಿಪಳ್ಳದಲ್ಲಿ ಜನವರಿ ಮೂರರಂದು ಮಧ್ಯಾಹ್ನ ದೀಪಕ್ ರಾವ್ ಮೇಲೆ ದುಷ್ಕರ್ಮಿಗಳು ಭೀಕರ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಅದೇ ದಿನ ರಾತ್ರಿ ರಾತ್ರಿ ಮಂಗಳೂರಿನ ಕೊಟ್ಟಾರಚೌಕಿಯಲ್ಲಿ ಬಶೀರ್ ಅವರ ಮೇಲೆ ದಾಳಿ ನಡೆದಿತ್ತು. ಆದರೆ ಕಾಟಿಪಳ್ಳದಲ್ಲಿ ದೀಪಕ್ ರಾವ್ ಮೇಲೆ ದಾಳಿ ನಡೆದಾಗಲೂ, ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲೂ ಎರಡು ಸಮುದಾಯಗಳ ಜನರ ನಡುವೆ ಯಾವುದೇ ಘರ್ಷಣೆ, ತಲವಾರು ಕಾಳಗ ಎಲ್ಲಿಯೂ ನಡೆದೇ ಇರಲಿಲ್ಲ. ತಮ್ಮ ಮೇಲೆ ದಾಳಿ ನಡೆಯುವಾಗ ದೀಪಕ್ ಹಾಗು ಬಷೀರ್ ಇಬ್ಬರ ಕೈಯಲ್ಲೂ ಯಾವುದೇ ಆಯುಧಗಳಿರಲಿಲ್ಲ. ಅವರು ಅಂದು ಯಾವುದೇ ಘರ್ಷಣೆಯಲ್ಲಿ ಭಾಗವಹಿಸಿರಲಿಲ್ಲ. ಬಶೀರ್ ತಮ್ಮ ಫಾಸ್ಟ್ ಫುಡ್ ಅಂಗಡಿಯನ್ನು ಮುಚ್ಚಿ ಮನೆಗೆ ಹೋಗುವಾಗ ಅವರ ಮೇಲೆ ಏಕಾಏಕಿ ದಾಳಿ ನಡೆದಿತ್ತು. ಈ ಬಗ್ಗೆ ಮಂಗಳೂರಿನ ಪೊಲೀಸ್ ಕಮಿಷನರ್ ಕೂಡ ಹೇಳಿಕೆ ನೀಡಿದ್ದಾರೆ. 

ಆದರೆ ಬಶೀರ್ ನಿಧನದ ಸುದ್ದಿಯನ್ನು ಬಿತ್ತರಿಸುವಾಗ ಪಬ್ಲಿಕ್ ಟಿವಿ ಇದಾವುದನ್ನೂ ನೋಡದೆ , ತನಗೆ ಬೇಕಾದಂತೆ ಸುದ್ದಿಯನ್ನು ತಿರುಚಿ, ಸುಳ್ಳನ್ನು ಸೇರಿಸಿ , ಮಸಾಲೆ ಬೆರೆಸಿ ' ಸುದ್ದಿ ' ಪ್ರಸಾರ ಮಾಡಿದೆ. ಇದು ಜನರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪಬ್ಲಿಕ್ ಟಿವಿಯ ಈ ಸುಳ್ಳು ವರದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಎದುರಾಗಿದೆ. ಸೂಕ್ಷ್ಮ ಪರಿಸ್ಥಿತಿ ಇರುವಾಗ ಜವಾಬ್ದಾರಿಯುತ ವರದಿಗಾರಿಕೆ ಮಾಡುವುದು ಬಿಟ್ಟು ಸುಳ್ಳು ಸುದ್ದಿ ನೀಡಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವುದು ಎಷ್ಟು ಸರಿ ? ಈ ಬಗ್ಗೆ ಯಾಕೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವುದಿಲ್ಲ ಎಂದು ಜನರು ಪ್ರಶ್ನಿಸುತ್ತಿದ್ದಾರೆ.    

ಬಶೀರ್ ನಿಧನದ ಬಗ್ಗೆ ಪಬ್ಲಿಕ್ ಟಿವಿ ನಿರೂಪಕನ ಮಸಾಲೆಭರಿತ ಸುದ್ದಿಯ ಆಡಿಯೋ ಈ ಕೆಳಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News