×
Ad

ಗಡಿಯಲ್ಲಿ 14,000 ಬಂಕರ್‌ಗಳ ನಿರ್ಮಾಣಕ್ಕೆ ಕೇಂದ್ರ ಅನುಮತಿ

Update: 2018-01-07 23:11 IST

ಶ್ರೀನಗರ, ಜ.7: ಗಡಿ ಭಾಗದಲ್ಲಿ ಪಾಕಿಸ್ತಾನಿ ಸೇನೆ ನಡೆಸುವ ಶೆಲ್ ಮತ್ತು ಗುಂಡಿನ ದಾಳಿಯಿಂದ ಸ್ಥಳೀಯ ಜನರಿಗೆ ರಕ್ಷಣೆ ಒದಗಿಸುವ ಸಲುವಾಗಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ 14,000 ಪ್ರತ್ಯೇಕ ಮತ್ತು ಸಮುದಾಯ ಬಂಕರ್‌ಗಳನ್ನು ನಿರ್ಮಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ಪೂಂಚ್ ಮತ್ತು ರಜೌರಿ ಜಿಲ್ಲೆಯಲ್ಲಿ 7298 ಬಂಕರ್‌ಗಳನ್ನು ನಿರ್ಮಿಸಿದರೆ 7162 ಬಂಕರ್‌ಗಳನ್ನು ಜಮ್ಮು, ಕತುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಅಂತಾರಾಷ್ಟ್ರೀಯ ಗಡಿಯ ಬಳಿ ಭೂಮಿಯೊಳಗಡೆ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 14,460 ಬಂಕರ್‌ಗಳ ನಿರ್ಮಾಣಕ್ಕೆ ಕೇಂದ್ರ ಸರಕಾರವು ರೂ. 415.73 ಕೋಟಿ ಮಂಜೂರು ಮಾಡಿದೆ ಎಂದು ಅವರು ತಿಳಿಸಿದ್ದಾರೆ. ಎಂಟು ಜನರ ಸಾಮರ್ಥ್ಯದ 160 ಚ.ಅಡಿಗಳ 13,029 ಪ್ರತ್ಯೇಕ ಬಂಕರ್‌ಗಳು ಮತ್ತು 40 ಜನರ ಸಾಮರ್ಥ್ಯದ 800 ಚ. ಅಡಿಗಳ 1431 ಸಮುದಾಯ ಬಂಕರ್‌ಗಳನ್ನು ನಿರ್ಮಿಸಲಾಗುವುದು. ಈ ಪೈಕಿ ರಜೌರಿಯಲ್ಲಿ 4918 ಪ್ರತ್ಯೇಕ ಮತ್ತು 372 ಸಮುದಾಯ ಬಂಕರ್‌ಗಳು, ಕತುವಾದಲ್ಲಿ 3076 ಪ್ರತ್ಯೇಕ ಮತ್ತು 243 ಸಮುದಾಯ ಬಂಕರ್‌ಗಳು, ಪೂಂಚ್‌ನಲ್ಲಿ 1320 ಪ್ರತ್ಯೇಕ ಮತ್ತು 688 ಸಮುದಾಯ ಬಂಕರ್‌ಗಳು, ಜಮ್ಮುವಿನಲ್ಲಿ 1200 ಪ್ರತ್ಯೇಕ ಮತ್ತು 120 ಸಮುದಾಯ ಹಾಗೂ ಸಾಂಬಾದಲ್ಲಿ 2515 ಪ್ರತ್ಯೇಕ ಮತ್ತು ಎಂಟು ಸಮುದಾಯ ಬಂಕರ್‌ಗಳನ್ನು ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತವು ಪಾಕಿಸ್ತಾನದೊಂದಿಗೆ 3,323 ಕಿ.ಮೀ ಗಡಿಯನ್ನು ಹಂಚಿಕೊಂಡಿದೆ. ಈ ಪೈಕಿ ಅಂತಾರಾಷ್ಟ್ರೀಯ ಗಡಿಯ 221 ಕಿ.ಮೀ ಮತ್ತು ನಿಯಂತ್ರಣ ರೇಖೆಯ 740 ಕಿ.ಮೀ ಜಮ್ಮು ಮತ್ತು ಕಾಶ್ಮೀರದಲ್ಲಿದೆ. ಕಳೆದ ವರ್ಷ ಪಾಕಿಸ್ತಾನ ನಡೆಸಿದ ಕದನ ವಿರಾಮ ಉಲ್ಲಂಘನೆಯಲ್ಲಿ 19 ಸೇನಾ ಸಿಬ್ಬಂದಿ, 12 ನಾಗರಿಕರು ಮತ್ತು ನಾಲ್ಕು ಬಿಎಸ್‌ಎಫ್ ಸಿಬ್ಬಂದಿ ಸೇರಿ 35 ಮಂದಿ ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News