ನಾವು ಅರಾಜಕತೆಯಲ್ಲಿ ಬದುಕುತ್ತಿದ್ದೇವೆಯೇ : ಶತ್ರುಘ್ನ ಸಿನ್ಹ ಪ್ರಶ್ನೆ
ಹೊಸದಿಲ್ಲಿ, ಜ.8: ಆಧಾರ್ ಮಾಹಿತಿ ಸೋರಿಕೆ ಬಗ್ಗೆ ವರದಿ ಮಾಡಿದ ಪತ್ರಕರ್ತರ ವಿರುದ್ಧವೇ ಪ್ರಕರಣ ದಾಖಲಾಗಿರುವುದು ಅತ್ಯಂತ ಖೇದಕರ ಎಂದಿರುವ ಬಿಜೆಪಿಯ ಹಿರಿಯ ಮುಖಂಡ ಶತ್ರುಘ್ನ ಸಿನ್ಹ, ನಾವು ಅರಾಜಕತೆಯಲ್ಲಿ ಬದುಕುತ್ತಿದ್ದೇವೆಯೇ ಎಂದು ಪ್ರಶ್ನಿಸಿದ್ದಾರೆ.
“ಇದು ಯಾವ ಸೀಮೆಯ ನ್ಯಾಯ. ಇಲ್ಲಿ ಸೇಡಿನ ರಾಜಕೀಯ ನಡೆಯುತ್ತಿದ್ದೆಯೇ. ದೇಶ ಮತ್ತು ಸಮಾಜದ ಹಿತಕ್ಕಾಗಿ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವ ಜನರನ್ನೂ ದೋಷಿಗಳೆಂದು ಬಿಂಬಿಸಲಾಗುತ್ತಿದೆ” ಎಂದು ಸಿನ್ಹ ಟ್ವೀಟ್ ಮಾಡಿದ್ದಾರೆ.
ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಿರುವುದಕ್ಕೆ ಬಲವಾದ ಪ್ರತಿಕ್ರಿಯೆ ನೀಡಿರುವ ಭಾರತೀಯ ಸಂಪಾದಕರ ಸಂಘವನ್ನು ಅಭಿನಂದಿಸಿದ ಅವರು, ಸುಪ್ರೀಂಕೋರ್ಟ್ ಹಾಗೂ ಸರಕಾರದಲ್ಲಿರುವ ಪ್ರಾಮಾಣಿಕ ಅಧಿಕಾರಿಗಳು ತಪ್ಪನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೇವಲ 500 ರೂ.ಗೆ ಆಧಾರ್ ಮಾಹಿತಿ ಬಹಿರಂಗಗೊಳಿಸಲಾಗುತ್ತಿದೆ ಎಂಬ ವರದಿ ಮಾಡಿದ ಪತ್ರಕರ್ತೆಯ ವಿರುದ್ಧ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಅಧಿಕಾರಿಗಳ ದೂರಿನ ಆಧಾರದಲ್ಲಿ ದಿಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.