ರಾಜಸ್ಥಾನದಲ್ಲಿ ‘ಪದ್ಮಾವತ್’ ಬಿಡುಗಡೆಗೆ ಅನುಮತಿಯಿಲ್ಲ: ಸಚಿವ ಕಟಾರಿಯ
ಜೈಪುರ, ಜ.8: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಸಿನಿಮಾವನ್ನು ಬಿಡುಗಡೆ ಮಾಡಲು ಸೆನ್ಸಾರ್ ಮಂಡಳಿ ಅನುಮತಿ ನೀಡಿದ್ದರೂ ಈ ಚಿತ್ರಕ್ಕೆ ಸಂಬಂಧಿಸಿದಂತೆ ರಾಜಕೀಯ ಮಾತ್ರ ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ. ಇದಕ್ಕೆ ಸೇರ್ಪಡೆಯೆಂಬಂತೆ ರಾಜಸ್ಥಾನ ಸರಕಾರವು ರಾಜ್ಯದಲ್ಲಿ ‘ಪದ್ಮಾವತ್’ ಸಿನಿಮಾದ ಬಿಡುಗಡೆಗೆ ಅನುಮತಿ ನೀಡುವುದಿಲ್ಲ ಎಂದು ಘೋಷಿಸಿದೆ.
ಮುಖ್ಯಮಂತ್ರಿ ವಸುಂಧರಾ ರಾಜೆಯವರು ಈ ಹಿಂದೆ ನೀಡಿದ ಆದೇಶದಂತೆ ಪದ್ಮಾವತ್ ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅನುಮತಿ ನೀಡುವುದಿಲ್ಲ ಎಂದು ರಾಜಸ್ಥಾನ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪದ್ಮಾವತ್ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಜನವರಿ 25ಕ್ಕೆ ನಿಗದಿಪಡಿಸಿದ ಕೆಲವೇ ಗಂಟೆಗಳಲ್ಲಿ ಸಚಿವರು ಈ ಹೇಳಿಕೆಯನ್ನು ನೀಡಿದ್ದಾರೆ.
ದೀಪಿಕಾ ಪಡುಕೋಣೆ, ರಣ್‌ವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಅಭಿನಯದ ‘ಪದ್ಮಾವತ್’ ಸಿನಿಮಾಕ್ಕೆ ಈ ಮೊದಲು ‘ಪದ್ಮಾವತಿ’ ಎಂದು ನಾಮಕರಣ ಮಾಡಲಾಗಿತ್ತು. ಈ ಚಿತ್ರದಲ್ಲಿ ರಜಪೂತ ರಾಣಿ ಪದ್ಮಾವತಿಯನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ರಜಪೂತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಈ ಸಿನಿಮಾದ ಬಿಡುಗಡೆಯ ಮೇಲೆ ನಿಷೇಧ ಹೇರಲಾಗಿತ್ತು.
ಚಿತ್ರದ ಹೆಸರು ಸೇರಿದಂತೆ ಹಲವು ಬದಲಾವಣೆಗಳ ಹೊರತಾಗಿಯೂ ಈ ಸಿನಿಮಾವನ್ನು ಪ್ರದರ್ಶಿಸುವ ಚಿತ್ರಮಂದಿರಗಳನ್ನು ಧ್ವಂಸಗೊಳಿಸುವುದಾಗಿ ರಜಪೂತ ಕರ್ಣಿ ಸೇನೆ ಎಚ್ಚರಿಕೆ ನೀಡಿದೆ.