ಮಾಧ್ಯಮ ಸ್ವಾತಂತ್ರ್ಯಕ್ಕೆ ಸರಕಾರವು ಬದ್ಧವಾಗಿದೆ: ರವಿಶಂಕರ್ ಪ್ರಸಾದ್

Update: 2018-01-08 16:26 GMT

ಹೊಸದಿಲ್ಲಿ,ಜ.8: ಆಧಾರ್ ದತ್ತಾಂಶ ಕೋಶ ಉಲ್ಲಂಘನೆಯ ಕುರಿತು ‘ದಿ ಟ್ರಿಬ್ಯೂನ್’ನ ವರದಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಕ್ರಮಕ್ಕೆ ಟೀಕೆಗಳ ನಡುವೆಯೇ ಕಾನೂನು ಹಾಗೂ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು, ಸರಕಾರವು ಮಾಧ್ಯಮ ಸ್ವಾತಂತ್ರ್ಯಕ್ಕೆ ಬದ್ಧವಾಗಿದೆ ಮತ್ತು ‘ಅಪರಿಚಿತ’ ಸಂಸ್ಥೆಗಳ ವಿರುದ್ಧ ಎಫ್‌ಐಆರ್ ಅನ್ನು ದಾಖಲಿಸಲಾಗಿದೆ ಎಂದು ಸೋಮವಾರ ಟ್ವೀಟಿಸಿದ್ದಾರೆ.

ಪತ್ರಿಕಾ ಸ್ವಾತಂತ್ರ್ಯ ಮತ್ತು ಆಧಾರ್ ಮಾಹಿತಿಗಳ ಸುರಕ್ಷತೆ ಹಾಗೂ ಪಾವಿತ್ರವನ್ನು ಕಾಯ್ದುಕೊಳ್ಳಲು ಸರಕಾರವು ಸಂಪೂರ್ಣ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 ಟ್ರಿಬ್ಯೂನ್‌ನ ವರದಿಗಾರ್ತಿ ರಚನಾ ಖೈರಾ ಅವರನ್ನು ಹೆಸರಿಸಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ದ ಅಧಿಕಾರಿಗಳು ನೀಡಿದ್ದ ದೂರಿನ ಮೇರೆಗೆ ದಿಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ, ತನಿಖಾ ಪತ್ರಿಕೋದ್ಯಮವನ್ನು ಕೈಗೊಳ್ಳುವ ತನ್ನ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಳ್ಳುವುದಾಗಿ ಪತ್ರಿಕೆಯು ಹೇಳಿದೆ.

ಪ್ರಕರಣವನ್ನು ಹಿಂದೆಗೆದುಕೊಳ್ಳಲು ಸರಕಾರದ ಮಧ್ಯಪ್ರವೇಶವನ್ನು ಕೋರಿರುವ ‘ದಿ ಎಡಿಟರ್ಸ್‌ ಗಿಲ್ಡ್ ಆಫ್ ಇಂಡಿಯಾ’ ಈ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದೆ.

ನಿಜವಾದ ಅಪರಾಧಿಗಳ ಕುರಿತು ತನಿಖೆಗೆ ಪೊಲೀಸರಿಗೆ ಎಲ್ಲ ನೆರವು ನೀಡುವಂತೆ ‘ಟ್ರಿಬ್ಯೂನ್’ ಮತ್ತು ಅದರ ವರದಿಗಾರ್ತಿಯನ್ನು ಕೋರಿಕೊಳ್ಳುವಂತೆ ತಾನು ಯುಐಡಿಎಐಗೆ ಸೂಚಿಸಿದ್ದೇನೆ ಎಂದೂ ಪ್ರಸಾದ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News