ಜಯ್ ಶಾ ಕುರಿತ ‘ದಿ ವೈರ್’ ವರದಿ ಮಾನಹಾನಿಕರ: ಗುಜರಾತ್ ಹೈಕೋರ್ಟ್

Update: 2018-01-09 16:45 GMT

ಹೊಸದಿಲ್ಲಿ, ಜ. 9: ನರೇಂದ್ರ ಮೋದಿ ಪ್ರಧಾನಿಯಾಗಿ ಒಂದು ವರ್ಷದ ಬಳಿಕ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಅವರ ಮಾಲಕತ್ವದ ಕಂಪೆನಿಯ ಆದಾಯದಲ್ಲಿ ತೀವ್ರ ಹೆಚ್ಚಳವಾಗಿರುವ ಬಗ್ಗೆ ದಿ ವೈರ್ ವರದಿ ಪ್ರಕಟಿಸಿರುವುದು ಮಾನಹಾನಿಕರ ಎಂದು ಗುಜರಾತ್ ಉಚ್ಚ ನ್ಯಾಯಾಲಯ ಸೋಮವಾರ ಹೇಳಿದೆ. ತನ್ನ ವಿರುದ್ಧ ಜಯ್ ಶಾ ದಾಖಲಿಸಿದ ಅರ್ಜಿ ತಳ್ಳಿ ಹಾಕುವಂತೆ ಕೋರಿ ‘ದಿ ವೈರ್’ ಸಲ್ಲಿಸಿದ ಮನವಿ ತಿರಸ್ಕರಿಸಿರುವ ನ್ಯಾಯಾಲಯ, ವರದಿ ಮಾಡಿದ ಪತ್ರಕರ್ತೆ ಕ್ರಿಮಿನಲ್ ಮಾನಹಾನಿಕರ ವಿಚಾರಣೆ ಎದುರಿಸಬೇಕಾಗಬಹುದು ಎಂದು ಹೇಳಿದೆ.

 ನರೇಂದ್ರ ಮೋದಿ ಪ್ರಧಾನಿ ಆಗಿರುವುದು ಹಾಗೂ ಕಂಪೆನಿಯ ಆರ್ಥಿಕ ವ್ಯವಹಾರದಲ್ಲಿ ಏರಿಕೆಯಾಗಿರುವುದನ್ನು ಜೋಡಿಸಿರುವುದು ಈ ವರದಿಯ ಕಳವಳಕಾರಿ ಭಾಗ ಎಂದು ನ್ಯಾಯಾಲಯ ತಿಳಿಸಿದೆ.

ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಹಾಗೂ ಅಮಿತ್ ಶಾ ಬಿಜೆಪಿಯ ರಾಷ್ಟ್ರಾಧ್ಯಕ್ಷರಾದ ಬಳಿಕ ಜಯ್ ಶಾ ಅವರ ಕಂಪೆನಿಯ ವಹಿವಾಟು 16,000 ಪಟ್ಟು ಏರಿಕೆಯಾಗಿದೆ ಎಂಬ ಪ್ರತಿಪಾದನೆ ವರದಿಯ ಕಳವಳಕಾರಿ ಭಾಗ ಎಂದು ನ್ಯಾಯಮೂರ್ತಿ ಜೆ.ಬಿ. ಪರ್ಡಿವಾಲ ಅವರು ಹೇಳಿದ್ದಾರೆ.

   ಸಾಮಾನ್ಯ ಕಂಪೆನಿಯೊಂದು ತೀರಾ ಕಡಿಮೆ 50,000 ರೂಪಾಯಿ ಆದಾಯದಿಂದ ಒಂದೇ ವರ್ಷದಲ್ಲಿ 80 ಸಾವಿರ ಕೋಟಿ ರೂ. ಆದಾಯಕ್ಕೆ ಏರಿರುವುದು ಜಯ್ ಶಾ ಅವರ ತಂದೆಯ ರಾಜಕೀಯ ಸ್ಥಾನಮಾನವೇ ಕಾರಣ ಎಂದು ‘ದಿ ವೈರ್’ ವರದಿ ಸೂಚಿಸಿತ್ತು.

ಭಾರತದಂತಹ ದೇಶದಲ್ಲಿ ಜನತೆ ಪಿರ್ಯಾದಿದಾರನು ರಾಜಕೀಯ ಸಂಪರ್ಕದ ಕಾರಣದಿಂದಲೇ ವ್ಯವಹಾರದಲ್ಲಿ ಪ್ರಗತಿ ಸಾಧಿಸಿದ್ದಾನೆ ಎಂದು ಯೋಜಿಸತೊಡಗುತ್ತಾರೆ ಎಂದು ಪರ್ಡಿವಾಲ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News