ಸುಳ್ಳು ಸುದ್ದಿ ಹಬ್ಬಿಸಿ ಕೋಮು ಸೌಹಾರ್ದತೆ ಕದಡಲು ಯತ್ನಿಸಿದ ಭರತ್ ವಿರುದ್ಧ ಗೂಂಡಾ ಕಾಯ್ದೆ ಹೇರಬೇಕು

Update: 2018-01-10 09:32 GMT

ಮಂಗಳೂರು, ಜ.10: ದೀಪಕ್ ರಾವ್ ಹಾಗು ಬಶೀರ್ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಇಲಾಖೆಗೆ ಅಭಿನಂದನೆಗಳು. ಈ ಎರಡೂ ಘಟನೆಗಳಿಗೆ ಕುಮ್ಮಕ್ಕು ನೀಡಿದವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಶೀರ್ ಹಾಗು ದೀಪಕ್ ಕೊಲೆ ಪ್ರಕರಣಗಳ ಆರೋಪಿಗಳ ಪರ ಯಾವುದೇ ಕಾರಣಕ್ಕೂ ದ.ಕ.ಜಿಲ್ಲೆಯ ಯಾವ ವಕೀಲರೂ ವಕಾಲತ್ತು ಮಾಡಬಾರದು. ಈ ಕುರಿತು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾ ವಕೀಲರ ಸಂಘಕ್ಕೆ ನಾಳೆ ಮನವಿ ಸಲ್ಲಿಸಲಾಗುವುದು ಎಂದರು.

ಒಂದು ವೇಳೆ ವಕೀಲರು ಆರೋಪಿಗಳ ಪರ ನಿಂತರೆ ಅವರು ದ,ಕ. ಜಿಲ್ಲೆಯ ಕೋಮು ಸೌಹಾರ್ದತೆಯ ವಿರುದ್ಧವಿದ್ದಾರೆ ಎಂದರ್ಥ. ತನ್ನ ಮೇಲೆ ದಾಳಿಗೆ ತಂಡವೊಂದು ಯತ್ನಿಸಿತ್ತು ಎಂದು ಸುಳ್ಳು ಸುದ್ದಿ ಹಬ್ಬಿಸಿದ ಭರತ್ ಜಿಲ್ಲೆಯ ಕೋಮು ಸೌಹಾರ್ದತೆ ಕದಡಲು ಯತ್ನಿಸಿದ್ದಾರೆ. ಇವರ ಮೇಲೆ ಗೂಂಡಾ ಕಾಯ್ದೆ ಹೇರಬೇಕು ಎಂದು ಕಮಿಷನರ್ ಗೆ ಮನವಿ ಮಾಡುತ್ತಿದ್ದೇನೆ ಎಂದು ಮಿಥುನ್ ರೈ ಇದೇ ಸಂದರ್ಭ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಲುಕ್ಮಾನ್, ಆಕಾಶಭವನ ಕಾರ್ಪೊರೇಟರ್ ದೀಪಕ್ ಪೂಜಾರಿ, ಪ್ರತಾಪ್ ಮಲ್ಲಿ, ದೇವಿಕಿರಣ್, ಸುಹೈಲ್ ಕಂದಕ್, ರಮಾನಂದ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News