ಕಂದಾವರದಲ್ಲಿ ನಿವೇಶನ ರಹಿತರ 174 ಮನೆಗಳ ತೆರವು ಕಾರ್ಯಾಚರಣೆ

Update: 2018-01-10 07:30 GMT

ಕುಂದಾಪುರ, ಜ.10: ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡ್ಲಕಟ್ಟೆ ಎಂಬಲ್ಲಿರುವ ಸರಕಾರಿ ಭೂಮಿಯಲ್ಲಿ ವಾಸವಾಗಿದ್ದ ನೂರಾರು ನಿವೇಶನ ರಹಿತರ ಗುಡಿಸಲು ಹಾಗೂ ಮನೆಗಳನ್ನು ಕುಂದಾಪುರ ತಹಶೀಲ್ದಾರ್ ನೇತೃತ್ವದಲ್ಲಿ ಬುಧವಾರ ತೆರವು ಕಾರ್ಯಾಚರಣೆ ನಡೆಸಿದ್ದು, ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಸ್ಥಳೀಯ ಸಿಪಿಎಂ ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಂದಾವರ ಗ್ರಾಮದ 24 ಎಕರೆ 61 ಸೆಂಟ್ಸ್ ಸರಕಾರಿ ಜಾಗದಲ್ಲಿ ಪರಿಶಿಷ್ಟ ಜಾತಿ ಸೇರಿದಂತೆ ನೂರಾರು ಕುಟುಂಬಗಳು ಕಳೆದ ಕೆಲವು ತಿಂಗಳುಗಳಿಂದ 174 ಮನೆ ಹಾಗೂ ಗುಡಿಸಲುಗಳನ್ನು ನಿರ್ಮಿಸಿ ವಾಸವಾಗಿದ್ದು, ಇಂದು ಬೆಳಗ್ಗಿನ ಜಾವ ಕುಂದಾಪುರ ತಹಶೀಲ್ದಾರ್ ಜಿ.ಎಂ. ಬೋರ್ಕರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ನಿವೇಶನ ರಹಿತರ ಗುಡಿಸಲು ಹಾಗೂ ಮನೆಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.

ಇದರ ವಿರುದ್ಧ ಸಿಪಿಎಂ ಮುಖಂಡರು, ಮಹಿಳೆಯರು ಸೇರಿದಂತೆ ನೂರಾರು ಮಂದಿ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಜೋಪಾಡಿಯೊಂದು ಬೆಂಕಿಗೆ ಅಹುತಿಯಾಗಿ ಸಂಪೂರ್ಣ ಸುಟ್ಟುಹೋಗಿದೆ. ಇದಕ್ಕೆ ಸಂಬಂಧಿಸಿದಂತೆ ಸಿಪಿಎಂ ಮುಖಂಡರಾದ ವೆಂಕಟೇಶ್ ಕೋಣಿ, ದಿನೇಶ್ ರಾಜೇಶ್ ಮೂಡ್ಲಕಟ್ಟೆ, ಗಣೇಶ್, ರವಿ, ಅನಂತ, ಜಗದೀಶ್, ಚಂದ್ರ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇರಿಸಿದ್ದಾರೆ.

ಈ ಸಂದರ್ಭ ಸಿಪಿಎಂ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಸುರೇಶ್ ಕಲ್ಲಾಗರ್, ನರಸಿಂಹ ಮೊದಲಾದವರು ಸ್ಥಳದಲ್ಲಿ ಹಾಜರಿದ್ದಾರೆ. ಈ ಕಾರ್ಯಾ ಚರಣೆಯಲ್ಲಿ ಕುಂದಾಪುರ, ಕುಂದಾಪುರ ಗ್ರಾಮಾಂತರ ಹಾಗೂ ಶಂಕರನಾರಾಯಣ ಪೊಲೀಸರು ಪಾಲ್ಗೊಂಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಸಹಾಯಕ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನಾವನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಬಡವರು ಸಾಲ ಮಾಡಿ ನಿರ್ಮಿಸಿದ ಲಕ್ಷಾಂತರ ರೂ. ಮೌಲ್ಯದ ಮನೆಗಳನ್ನು ಪೊಲೀಸ್ ಬಲದೊಂದಿಗೆ ಜೆಸಿಬಿ ಮೂಲಕ ಕೆಡವಿ ಹಾಳು ಮಾಡಿರುವುದು ಅಕ್ಷಮ್ಯ. ಇದರಲ್ಲಿ 70 ಕ್ಕೂ ಅಧಿಕ ಪರಿಶಿಷ್ಟ ಜಾತಿಯವರ ಮನೆಗಳು ಕೂಡ ಇವೆ. 94ಸಿ, 94ಸಿಸಿಯಲ್ಲಿ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡುವುದಾಗಿ ಹೇಳಿರುವ ಸರಕಾರ ಈ ಕುಟುಂಬಗಳಿಗೆ ಅನ್ಯಾಯ ಮಾಡಿದೆ’ ಎಂದು ಸಿಪಿಎಂ ಮುಖಂಡ ಸುರೇಶ್ ಕಲ್ಲಾಗರ್ ಆರೋಪಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News