ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಟಿಕೆಟ್ ಕನಸು ಭಗ್ನ

Update: 2018-01-10 13:25 GMT
ಅಭಯಚಂದ್ರ ಜೈನ್‌, ಐವನ್ ಡಿಸೋಜ, ಮಿಥುನ್ ರೈ

ಮುಖ್ಯಮಂತ್ರಿಯ ಭೇಟಿ ವೇಳೆ ಒಳಪ್ರವೇಶಿಸಲು ಹರಸಾಹಸ ಪಟ್ಟ ಯವ ಕಾಂಗ್ರೆಸ್ ಮುಖಂಡ

ಮಂಗಳೂರು, ಜ.10:  ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು ಕಳೆದ ಮೂರು ವರ್ಷದಿಂದ ‘ರಾಜಕೀಯ’ ಸೇವೆಯಲ್ಲಿ ನಿರತರಾಗಿದ್ದ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಮೊದಲ ಯತ್ನದಲ್ಲಿ ದೊಡ್ಡ ಹಿನ್ನೆಡೆಯಾಗಿದೆ.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಲು ಹರಸಾಹಸ ಪಡುತ್ತಿದ್ದ ಮಿಥುನ್ ರೈಗೆ ಮೊನ್ನೆ ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮುಖ ಭಂಗವಾಗಿದೆ. ಅಲ್ಲಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಮುಂದಿನ ಬಾರಿ ಹಾಲಿ ಶಾಸಕ ಅಭಯಚಂದ್ರ ಜೈನ್‌ಗೆ ಟಿಕೆಟ್ ನೀಡಲಾಗುವುದು. ಸತತ 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಅಭಯಚಂದ್ರ ಜೈನ್ ಅವರನ್ನು ಸತತ ನಾಲ್ಕು ಬಾರಿ ನೀವು ಗೆಲ್ಲಿಸಿದ್ದೀರಿ. ಮುಂದೆಯೂ ನೀವು ಅವರನ್ನು ಗೆಲ್ಲಿಸುವಿರಾ ?’ ಎಂದು ಕಾರ್ಯಕರ್ತರಲ್ಲಿ ಪ್ರಶ್ನಿಸಿದರು. ಆವಾಗ ಕಾರ್ಯಕರ್ತರೆಲ್ಲಾ ‘ಹೌದು... ನಾವು ಅವರನ್ನು ಗೆಲ್ಲಿಸುವೆವು...ಮತ್ತೆ ಅವರು ಸಚಿವರಾಗಿ ಮೆರೆಯುವುದನ್ನು ಕಾಣುವೆವು’ ಎಂದು ಹರ್ಷೋದ್ಘರಿಸಿದರು. ಇದು ವೇದಿಕೆಯ ಮೇಲಿದ್ದ ಮತ್ತೋರ್ವ ಟಿಕೆಟ್ ಆಕಾಂಕ್ಷಿ, ಮುಖ್ಯಮಂತ್ರಿಯ ಬಲಗೈ ಬಂಟ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಮತ್ತು ವೇದಿಕೆಯ ಕೆಳಗೆ ಮುಂಭಾಗದಲ್ಲಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮತ್ತವರ ಬೆಂಬಲಿಗರಿಗೆ ನಿರಾಸೆ ತಂದಿದೆ.

‘ವಯಸ್ಸಾಯಿತು... ಇನ್ನು ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ಯುವ ಕಾಂಗ್ರೆಸ್ ಜಿಲ್ಲೆಯಲ್ಲೊಂದು ಟಿಕೆಟ್ ಕೊಡಿ ಎಂದು ಕೇಳುತ್ತಿದೆ. ಪಕ್ಷದ ಹೈಕಮಾಂಡ್ ಯುವಕರಿಗೆ ಟಿಕೆಟ್ ಕೊಡುವುದಾದರೆ ನಾನು ನನ್ನ ಕ್ಷೇತ್ರ ಬಿಟ್ಟುಕೊಡುವೆ’ ಎಂದು ಈ ಹಿಂದೆ ಅಭಯಚಂದ್ರ ಜೈನ್ ಅಲ್ಲಲ್ಲಿ ಹೇಳಿಕೊಂಡಿದ್ದರು. ಮೀಸಲು ಕ್ಷೇತ್ರವಾದ ಸುಳ್ಯ ಹೊರತುಪಡಿಸಿ ಇತರ ಕ್ಷೇತ್ರದ ಮೇಲೆ ಒಂದು ಕಣ್ಣಿಟ್ಟಿದ್ದ ಮಿಥುನ್ ರೈ ಅವರು ಅಭಯಚಂದ್ರ ಜೈನ್‌ರ ಈ ಮಾತು ಕೇಳಿದ್ದೇ ತಡ ತನ್ನ ‘ರಾಜಕೀಯ’ ಸೇವೆಯನ್ನು ಮೂಡುಬಿದಿರೆಗೆ ಮೀಸಲಿಟ್ಟರು. ಯುವ ಕಾಂಗ್ರೆಸ್ ಅಧ್ಯಕ್ಷತೆಯ ಬಲದಲ್ಲಿ ಎಂಎಲ್‌ಎ ಟಿಕೆಟ್ ಪಡೆಯಲು ಸಜ್ಜಾದರು. ಅಭಯ ಚಂದ್ರ ಜೈನ್ ಕೂಡ ‘ಅಭಯ’ ನೀಡಿದರು. ಹೇಗೂ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ಮತ ಗ್ಯಾರಂಟಿಯಿದೆಯೆಂದು ಬಿಜೆಪಿಯತ್ತ ಹೋಗುವ ಮತಗಳನ್ನು ಸೆಳೆಯಲು ಗೋ ಸೇವೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಪತ್ರಿಕೆಗಳಲ್ಲಿ ಮಿಥುನ್ ರೈ ಗೋವುಗಳೊಂದಿಗೆ ನಿಂತುಕೊಂಡ, ಕುಳಿತುಕೊಂಡು ಫೋಟೋಗಳು ರಾರಾಜಿಸಿದವು. ಮೃದು ಹಿಂದುತ್ವದತ್ತ ಅವರು ವಾಲಿದ್ದಾರೆ ಎಂಬ ಆರೋಪಗಳು ಅವರ ಕಾರ್ಯಕರ್ತರಿಂದಲೇ ಕೇಳಿ ಬಂದವು.

ಈ ಮಧ್ಯೆ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಈಗಾಗಲೆ ತನ್ನಿಂದ ದೂರವಾಗಿದ್ದ ಶಿಷ್ಯ ಮಿಥುನ್ ರೈಯನ್ನು ದೂರವಿಡುವ ಸಲುವಾಗಿ ಮೂಡುಬಿದಿರೆ ಕ್ಷೇತ್ರದ ಮೇಲೆ ಕಣ್ಣಿಟ್ಟರು. ‘ಅಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿದ್ದಾರೆ. ತನ್ನ ಬೆಂಬಲಿಗರ ಸಂಖ್ಯೆ ಅಲ್ಲಿ ಹೆಚ್ಚಿದೆ. ತನಗೂ ಆ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೊಡಿ’ ಎಂದು ಹೈಕಮಾಂಡ್ ಮುಂದೆ ಭಿನ್ನವಿಸಿಕೊಂಡರು. ಅಷ್ಟೇ ಅಲ್ಲ, ತನ್ನ ಸೇವೆಯನ್ನು ಮುಂದುವರಿಸಲು ಮೂಡುಬಿದಿರೆಯಲ್ಲಿ ಕಚೇರಿಯೊಂದನ್ನೂ ತೆರೆದರು.

ಇದು ಗುರು-ಶಿಷ್ಯರ ನಡುವೆ ಮತ್ತಷ್ಟು ಬಿರುಕಿಗೆ ಕಾರಣವಾಯಿತು. ಹಾಲಿ ಶಾಸಕ ಅಭಯಚಂದ್ರ ಜೈನ್ ತನ್ನ ಪರವಾಗಿದ್ದಾರೆ ಮತ್ತು ಇಂಧನ ಸಚಿವ ಡಿಕೆಶಿಯ ಬೆಂಬಲವೂ ತನಗಿದೆ ಎಂಬ ಆಸೆಯೊಂದಿಗೆ ಕ್ಷೇತ್ರದುದ್ದಕ್ಕೂ ಓಡಾಡಿದ ಮಿಥುನ್ ರೈ ಎಲ್ಲೆಲ್ಲಿ ತನ್ನ ಗುರು ಐವನ್ ಡಿಸೋಜರನ್ನು ಹಣಿಯಲು ಸಾಧ್ಯವೋ ಅಲ್ಲೆಲ್ಲಾ ಹಣಿಯತೊಡಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮತ್ತಿತರರು ಮಂಗಳೂರಿಗೆ ಬಂದಾಗಲೆಲ್ಲಾ ಐವನ್ ಡಿಸೋಜ ಮತ್ತು ಮಿಥುನ್ ರೈ ಶಕ್ತಿ ಪ್ರದರ್ಶನಕ್ಕಿಳಿದರು. ತಾನು ಯುವಕರಿಗೆ ಬಿಟ್ಟುಕೊಡಲು ನಿರ್ಧರಿಸಿದ್ದ ತನ್ನ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಐವನ್ ಡಿಸೋಜರ ವಿರುದ್ಧ ಶಾಸಕ ಅಭಯಚಂದ್ರ ಜೈನ್ ಕೂಡ ಸಿಟ್ಟಾಗಿದ್ದರು.
ಆದರೆ ಮೊನ್ನೆ ಗುರು-ಶಿಷ್ಯರಂತಿದ್ದ ಐವನ್ ಡಿಸೋಜ ಮತ್ತು ಮಿಥುನ್ ರೈಯ ಆಸೆಗೆ ಸ್ವತ: ಮುಖ್ಯಮಂತ್ರಿ ಸಿದ್ದರಾಮಯ್ಯ ತಣ್ಣೀರೆರಚಿದ್ದಾರೆ. ಭಾಷಣಕ್ಕೆ ನಿಂತ ಸಿದ್ದರಾಮಯ್ಯ ಶಾಸಕ ಅಭಯಚಂದ್ರ ಜೈನ್‌ರನ್ನು ಹಾಡಿ ಹೊಗಳಿದರಲ್ಲದೆ ಮುಂದೆಯೂ ಅಭಯಚಂದ್ರ ಜೈನ್‌ಗೇ ಟಿಕೆಟ್ ಎಂದು ಘೋಷಿಸಿದರು.

‘ನಿನಗೆ ಆರೋಗ್ಯವಿದೆ. ಒಳ್ಳೆಯ ಕೆಲಸ ಮಾಡಿದ್ದೀಯಾ? ಕಾರ್ಯಕರ್ತರೂ ನಿನ್ನ ಬೆಂಬಲಕ್ಕೆ ನಿಂತಿದ್ದೀಯಾ? ಮತ್ತೆ ಯಾಕೆ ಸ್ಪರ್ಧಿಸುವುದಿಲ್ಲಾ ಎನ್ನುವುದು. ನೀನು ಮತ್ತೆ ಸ್ಪರ್ಧಿಸು, ಟಿಕೆಟ್ ಗ್ಯಾರಂಟಿ ಎಂದೆ. ಜೈನ್ ಅದಕ್ಕೆ ಒಪ್ಪಿಕೊಂಡಿದ್ದಾರೆ. ಹಾಗಾಗಿ ಹೈಕಮಾಂಡ್ ಮತ್ತೆ ಅವರಿಗೆ ಟಿಕೆಟ್ ನೀಡಲಿದೆ. ನೀವು ಅವರನ್ನು ಗೆಲ್ಲಿಸಿರಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಆ ಮಾತಿಗೆ ’ಆಯ್ಯಯ್ತು’ ಎಂದು ಅಭಯಚಂದ್ರ ಜೈನ್ ತಲೆಯಾಡಿಸಿ ಒಪ್ಪಿಕೊಂಡರು. ಅದರೊಂದಿಗೆ ಮೂಡುಬಿದಿರೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಮಿಥುನ್ ರೈಗೆ ಮೊದಲ ಯತ್ನದಲ್ಲಿ ಹಿನ್ನಡೆಯಾಗಿದೆ. ಆದರೆ ಮುಖ್ಯಮಂತ್ರಿಯ ಹೇಳಿಕೆಯ ಬಳಿಕವೂ ಐವನ್ ಡಿಸೋಜ ತನ್ನ ಪ್ರಯತ್ನದಿಂದ ಹಿಂಜರಿದಂತಿಲ್ಲ. ತನ್ನ ಹಳೆಯ ಸ್ನೇಹದ ಸಲುಗೆ ಬಳಸಿ ಮೂಡುಬಿದಿರೆ ಅಥವಾ ಇತರ ಕ್ಷೇತ್ರದ ದಕ್ಕಿಸಿಕೊಂಡರೆ ಅಚ್ಚರಿ ಇಲ್ಲ. ಆದರೆ, ಮಿಥುನ್ ರೈಗೆ ಮೂಡುಬಿದಿರೆ ಹೊರತುಪಡಿಸಿದರೆ ಬೇರೆ ಯಾವ ಕ್ಷೇತ್ರವೂ ಖಾಲಿ ಇಲ್ಲ.

ವೈರಲ್ ಆದ ವೀಡಿಯೋ: ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದ ಮಿಥುನ್ ರೈಯ ಪರಿಚಯ ಸ್ಥಳೀಯ ಪೊಲೀಸರಿಗೆ ಇಲ್ಲದೇನೂ ಅಲ್ಲ. ಮೂಡುಬಿದಿರೆಯ ಮೊನ್ನೆಯ ಕಾರ್ಯಕ್ರಮದ ಯಶಸ್ಸಿಗೆ ಓಡಾಡಿದ್ದ ಮಿಥುನ್ ರೈ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಗೆ ಆಗಮಿಸುವ ಕೆಲವೇ ಕ್ಷಣದ ಮುಂಚೆ ಒಳ ಪ್ರವೇಶಿಸಲು ಹರಸಾಹಸ ಪಡಬೇಕಾಯಿತು. ಕರ್ತವ್ಯ ನಿರತ ಪೊಲೀಸರು ಮಿಥುನ್ ರೈ ಒಳಪ್ರವೇಶಿಸಲು ಅಡ್ಡಿಪಡಿಸಿದರು. ಇದನ್ನು ನಿರೀಕ್ಷಿಸದಿದ್ದ ಮಿಥುನ್ ರೈ ಸಿಟ್ಟಾಗಿ ಪೊಲೀಸರ ಜೊತೆ ವಾಗ್ವಾದಕ್ಕಿಳಿದರು. ಅವರ ಜೊತೆ ಇದ್ದ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಮಿಥುನ್ ರೈ ಒಳ ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು. ಹೀಗೆ ಒಳಪ್ರವೇಶಿಸಿದ ಮಿಥುನ್ ರೈಯಲ್ಲಿ ಆನಾಥಭಾವ ಮೂಡಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಯಾಗುತ್ತಿವೆ.

ನಾನೇ ಸ್ಪರ್ಧಿಸುವೆ: ಹೌದು... ಹೈಕಮಾಂಡ್ ಟಿಕೆಟ್ ನೀಡಿದರೆ ಮುಂದಿನ ಬಾರಿ ನಾನೇ ಸ್ಪರ್ಧಿಸುವೆ. ಇನ್ನು ಯುವಕರಿಗೆ ಜಿಲ್ಲೆಯಲ್ಲಿ ಒಂದು ಕ್ಷೇತ್ರ ಬಿಟ್ಟುಕೊಡಿ ಎಂದು ಹೈಕಮಾಂಡ್ ಸೂಚಿಸಿದರೆ ನಾನು ಬಿಟ್ಟುಕೊಡುವೆ. ಪ್ರಧಾನಿ ನರೇಂದ್ರ ಮೋದಿಯನ್ನು ಎದುರಿಸಲು ಯುವ ಪಡೆ ಸಜ್ಜಾಗಬೇಕು. ಅದಕ್ಕಾಗಿ ಯುವಕರಿಗೆ ಹೆಚ್ಚೆಚ್ಚು ಅವಕಾಶ ಮಾಡಿಕೊಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದಾಹಿಗಳ ಅಗತ್ಯವಿಲ್ಲ. ಎದೆಗಾರಿಕೆಯ ಯುವಕರು ಬೇಕು. ಅವರಿಂದ ಮಾತ್ರ ಮೋದಿಯನ್ನು ಎದುರಿಸಲು ಸಾಧ್ಯ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಅಭಯಚಂದ್ರ ಜೈನ್ ‘ವಾರ್ತಾಭಾರತಿ’ಗೆ ತಿಳಿಸಿದರು.

ಕ್ಷೇತ್ರದ ಇತಿಹಾಸ

1957ರಲ್ಲಿ ಚುನಾವಣೆ ನಡೆದಾಗ ಮೂಡುಬಿದಿರೆ ಕ್ಷೇತ್ರ ಇರಲಿಲ್ಲ. 1962ರಲ್ಲಿ ಇದು ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರವಾಗಿತ್ತು. ಅದರಂತೆ ಸ್ವತಂತ್ರ ಪಕ್ಷದ ಗೊಪಾಲ ಸಾಲಿಯಾನ್ ಶಾಸಕರಾದರು. 1967ರಲ್ಲಿ ಸ್ವತಂತ್ರ ಪಕ್ಷದ ರತನ್ ಕುಮಾರ್ ಶಾಸಕರಾದರು. 1972 ಮತ್ತು 1978ರಲ್ಲಿ ಕಾಂಗ್ರೆಸ್ ಪಕ್ಷದ ದಾಮೋದರ ಮುಲ್ಕಿ, 1983,1885ರಲ್ಲಿ ಜನತಾ ಪಾರ್ಟಿಯ ಕೆ. ಅಮರನಾಥ ಶೆಟ್ಟಿ, 1989ರಲ್ಲಿ ಕಾಂಗ್ರೆಸ್‌ನ ಸೋಮಪ್ಪ ಸುವರ್ಣ, 1994ರಲ್ಲಿ ಜನತಾ ದಳದ ಕೆ. ಅಮರನಾಥ ಶೆಟ್ಟಿ, 1999, 2004, 2008, 2013ರಲ್ಲಿ ಸತತ ನಾಲ್ಕು ಬಾರಿ ಅಭಯಚಂದ್ರ ಜೈನ್ ಶಾಸಕರಾದರು. ಇಲ್ಲಿ ಸ್ವತಂತ್ರ ಪಕ್ಷ, ಜನತಾ ಪಾರ್ಟಿ, ಜನತಾ ದಳ, ಕಾಂಗ್ರೆಸ್ ಖಾತೆ ತೆರೆದಿದೆ. ಆದರೆ, ಬಿಜೆಪಿಗೆ ಸಾಧ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News