ಸಂಸದರ ಸಂಬಳ ಏರಿಕೆ ಪ್ರಸ್ತಾಪದ ಚರ್ಚೆಗಾಗಿ ಜ.12ರಂದು ಸಭೆ

Update: 2018-01-10 13:41 GMT

ಹೊಸದಿಲ್ಲಿ,ಜ.10: ವೇತನ ಮತ್ತು ಭತ್ಯೆಗಳ ಕುರಿತ ಲೋಕಸಭಾ ಸಮಿತಿಯು ಜ.12ರಂದು ಸಭೆ ಸೇರಲಿದ್ದು, ಸಂಸದರ ವೇತನವನ್ನು ಒಂದು ಲಕ್ಷ ರೂ.ಗೆ ಹೆಚ್ಚಿಸಲು ಹಳೆಯ ಪ್ರಸ್ತಾಪವೊಂದನ್ನು ಚರ್ಚಿಸುವ ಸಾಧ್ಯತೆಯಿದೆ.

ಸಂಸದರು ಹಾಲಿ ಮಾಸಿಕ 50,000 ರೂ.ಮೂಲವೇತನ ಮತ್ತು 45,000 ರೂ. ಕ್ಷೇತ್ರಭತ್ಯೆಯನ್ನು ಪಡೆಯುತ್ತಿದ್ದಾರೆ. ಸಂಸತ್ತು ಮತ್ತು ಸಂಬಂಧಿತ ಸಭೆಗಳಿಗೆ ಹಾಜರಾತಿ ಭತ್ಯೆಯಾಗಿ ದೈನಿಕ 2,000 ರೂ.ಗಳ ಭತ್ಯೆಗೂ ಅವರು ಅರ್ಹರಾಗಿದ್ದಾರೆ. ಸಂಸದರ ವೇತನವನ್ನು ಹೆಚ್ಚಿಸುವ ಪ್ರಸ್ತಾಪಕ್ಕೆ ಎನ್‌ಡಿಎ ಸರಕಾರವು ಈವರೆಗೂ ಬೆಂಬಲವನ್ನು ವ್ಯಕ್ತಪಡಿಸಿಲ್ಲ.

ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ವೇತನಗಳನ್ನು ಹೆಚ್ಚಿಸುವ ಶಾಸನವೊಂದನ್ನು ಲೋಕಸಭೆಯು ಅಂಗೀಕರಿಸಿರುವ ಹಿನ್ನೆಲೆಯಲ್ಲಿ ಸಮಿತಿಯು ಸಭೆಯನ್ನು ಕರೆದಿರುವುದು ಮಹತ್ವವನ್ನು ಪಡೆದುಕೊಂಡಿದೆ. ಕೇಂದ್ರ ಸರಕಾರಿ ನೌಕರರ ವೇತನಗಳನ್ನು ಹೆಚ್ಚಿಸಲು ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಸರಕಾರವು ಈ ಹಿಂದೆಯೇ ಒಪ್ಪಿಕೊಂಡಿದೆ.

ಸದನ ಸಮಿತಿಯ ಸಲಹೆಗಳನ್ನು ಸರಕಾರವು ಒಪ್ಪಿಕೊಂಡರೆ ಸಂಸದರ ವೇತನ ಹೆಚ್ಚಳಕ್ಕಾಗಿ ಹೊಸ ಮಸೂದೆಯೊಂದನ್ನು ಸಂಸತ್ತು ಅಂಗೀಕರಿಸಬೇಕಾಗುತ್ತದೆ.

2015,ಡಿಸೆಂಬರ್‌ನಲ್ಲಿ ಆದಿತ್ಯನಾಥ್ ನೇತೃತ್ವದ ಆಗಿನ ವೇತನಗಳು ಮತ್ತು ಭತ್ಯೆಗಳ ಕುರಿತ ಸದನ ಸಮಿತಿಯು ಸಂಸದರ ವೇತನಗಳಲ್ಲಿ ಶೇ.100ರಷ್ಟು ಏರಿಕೆಯನ್ನು ಶಿಫಾರಸು ಮಾಡಿತ್ತು. ಆದರೆ ಈ ಪ್ರಸ್ತಾಪವು ಹಾಗೆಯೇ ಉಳಿದುಕೊಂಡಿದೆ.

ಸಂಸದರು ತಮ್ಮ ಅಧಿಕಾರಾವಧಿಯಲ್ಲಿ ಸೀಮಿತ ಸಂಖ್ಯೆಯ ಉಚಿತ ವಿಮಾನ ಪ್ರಯಾಣ ಟಿಕೆಟ್‌ಗಳು, ಉಚಿತ ವಸತಿ ಮತ್ತು ಸಿಬ್ಬಂದಿ ಭತ್ಯೆಗಳಿಗೂ ಅರ್ಹರಾಗಿ ರುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News