×
Ad

ತನ್ನ ವರದಿಗಾರನನ್ನು ‘ಗೂಂಡಾ’ ಎಂದ ಅರ್ನಬ್ ರ ರಿಪಬ್ಲಿಕ್ ಟಿವಿಗೆ ಎಬಿಪಿ ನ್ಯೂಸ್ ಚಾಟಿ

Update: 2018-01-10 19:31 IST

ಹೊಸದಿಲ್ಲಿ, ಜ.10: ಸುದ್ದಿ ಪ್ರಸಾರದ ಸಂದರ್ಭ ತನ್ನ ವರದಿಗಾರರೊಬ್ಬರನ್ನು ‘ಗೂಂಡಾ’ ಎಂದು ಬಿಂಬಿಸಿದ 'ರಿಪಬ್ಲಿಕ್ ಟಿವಿ' ಚಾನೆಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರಸಿದ್ಧ ಹಿಂದಿ ಚಾನೆಲ್ 'ಎಬಿಪಿ ನ್ಯೂಸ್' ಈ ಬಗ್ಗೆ ಅರ್ನಬ್ ಗೋಸ್ವಾಮಿ 'ಪ್ರೈಮ್ ಟೈಮ್'ನಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.

ಈ ಬಗ್ಗೆ jantakareporter.com ವರದಿ ಮಾಡಿದೆ. ದಿಲ್ಲಿಯಲ್ಲಿ ಜಿಗ್ನೇಶ್ ಮೇವಾನಿ ನೇತೃತ್ವದಲ್ಲಿ ನಡೆದ ರ್ಯಾಲಿಯ ಸಂದರ್ಭ ಅಲ್ಲಿದ್ದ ಕೆಲವರು ರಿಪಬ್ಲಿಕ್ ಟಿವಿಯ ವರದಿಗಾರ್ತಿಯನ್ನು ಬೆದರಿಸಿದ್ದಾರೆ ಎಂದು ಆರೋಪಿಸಿದ್ದ 'ರಿಪಬ್ಲಿಕ್ ಟಿವಿ' ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಕೆಲವರ ಫೋಟೊಗಳನ್ನು ಬಿತ್ತರಿಸಿತ್ತು.

“ನಮ್ಮ ವರದಿಗಾರ್ತಿ ಶಿವಾನಿಯನ್ನು ಬೆದರಿಸಿದ ಅಸಭ್ಯರ ವಿಡಿಯೋಗಳನ್ನು ನಾನು ನಿಮ್ಮ ಮುಂದಿಡುತ್ತೇನೆ” ಎಂದು ಅರ್ನಬ್ ಗೋಸ್ವಾಮಿ ತಮ್ಮ ಎಂದಿನ ಶೈಲಿಯಲ್ಲಿ ಕಿರುಚುತ್ತಾ ವರದಿ ಮಾಡಿದ್ದರು.

ಅಂಕಣಕಾರ್ತಿ ಪ್ರತಿಷ್ಠಾ ಸಿಂಗ್ ರ ಪತಿಯನ್ನು ಹಾಗು ಎಬಿಪಿ ನ್ಯೂಸ್ ನ ವರದಿಗಾರ ಜೈನೇಂದ್ರ ಕುಮಾರ್ ರನ್ನು ವಿಡಿಯೋದಲ್ಲಿ ಕೆಂಪು ವೃತ್ತದಲ್ಲಿ ಕೆಲ ವ್ಯಕ್ತಿಗಳೊಂದಿಗೆ ತೋರಿಸಲಾಗಿತ್ತು. ಈ ಬಗ್ಗೆ ಎಬಿಪಿಯ ಅಭಿಸಾರ್ ಶರ್ಮಾ ಫೇಸ್ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

“ಕಳೆದ ರಾತ್ರಿ ರಿಪಬ್ಲಿಕ್ ಟಿವಿ ಅಮಾಯಕ ವ್ಯಕ್ತಿಯೊಬ್ಬರನ್ನು ಹಾಗು ಭಾರತದ ಪ್ರಸಿದ್ಧ ವರದಿಗಾರರಾದ ಜೈನೇಂದ್ರ ಕುಮಾರ್ ರನ್ನು ಗೂಂಡಾಗಳೆಂದು ಕರೆದಿತ್ತು. ಈ ಚಾನೆಲ್ ಇರುವುದಾದರೂ ಯಾತಕ್ಕೆ?, ಇವರೆಲ್ಲಾ ಎಲ್ಲಿಂದ ಬಂದವರು?, ಈ ಚಾನೆಲ್ ಅನ್ನು ನಡೆಸುತ್ತಿರುವವರು ಯಾವ ರೀತಿಯ ಮಾನಸಿಕ ರೋಗದವರು?, ಇಲ್ಲಿ ಗೂಂಡಾಗಳು ಯಾರು? ಬಯಸಿದ್ದನ್ನು ಪ್ರಸಾರ ಮಾಡುವವರು ಇವರು, ನಿರ್ದಿಷ್ಟ ರಾಜಕೀಯ ಪಕ್ಷದಿಂದ ಸುಪಾರಿ ಪಡೆದುಕೊಂಡು ಇನ್ನೊಬ್ಬರ ಮಾನಹಾನಿ ಮಾಡುವವರು ಇವರು. ಇನ್ನೊಂದು ಚಾನೆಲ್ ನ ವರದಿಗಾರರನ್ನು ಮತ್ತೊಂದು ಚಾನೆಲ್ ‘ಗೂಂಡಾ’ ಎಂದು ಕರೆದದ್ದು ಇದೇ ಮೊದಲು. ಇವರು ಎಲ್ಲಾ ಮಿತಿಗಳನ್ನು ದಾಟುತ್ತಿದ್ದಾರೆ” ಎಂದು ಅಭಿಸಾರ್ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದರು. 

ಈ ಬಗ್ಗೆ ಅರ್ನಬ್ ವರದಿಗಾರನ ಕ್ಷಮೆ ಯಾಚಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ತನ್ನ 'ಪ್ರೈಮ್ ಟೈಮ್' ನಲ್ಲೇ ಲೈವ್ ನಲ್ಲಿ ಅರ್ನಬ್ ಕ್ಷಮೆ ಯಾಚಿಸಬೇಕು ಎಂದಿರುವ ಎಬಿಪಿ ನ್ಯೂಸ್ ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದೆ ಎನ್ನಲಾಗಿದೆ ಎಂದು  jantakareporter.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News