ಕೇರಳ ಸೋಲಾರ್ ಹಗರಣ : ಮಾಜಿ ಸಿಎಂ ಚಾಂಡಿ ಹೇಳಿಕೆ ದಾಖಲಿಸಿದ ಪೊಲೀಸರು

Update: 2018-01-10 14:20 GMT

ತಿರುವನಂತಪುರಂ, ಜ.10: ಕೇರಳ ಸೋಲಾರ್ ಹಗರಣದಲ್ಲಿ ತನ್ನನ್ನು ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಸೋಮವಾರ ಚಾಂಡಿ ನಿವಾಸಕ್ಕೆ ತೆರಳಿ ಸುಮಾರು 1 ಗಂಟೆ ಅಲ್ಲಿದ್ದ ಪೊಲೀಸರು ಹಗರಣದ ಕುರಿತು ಚಾಂಡಿಯವರ ಹೇಳಿಕೆಯನ್ನು ದಾಖಲಿಸಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 2013ರಲ್ಲಿ ಆಗಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿಯ ನಿಕಟವರ್ತಿಗಳು ಎಂದು ಹೇಳಿಕೊಂಡು ಸರಿತಾ ನಾಯರ್ ಮತ್ತು ಆಕೆಯ ‘ಲಿವ್ ಇನ್’ ಸಂಗಾತಿ ಬಿಜು ರಾಧಾಕೃಷ್ಣನ್ ಕಡಿಮೆ ಬೆಲೆಯಲ್ಲಿ ಸೋಲಾರ್ ಪ್ಯಾನೆಲ್‌ಗಳನ್ನು ಒದಗಿಸುವ ಯೋಜನೆ ಪ್ರಕಟಿಸಿ ಹಲವಾರು ಉದ್ಯಮಿಗಳನ್ನು ವಂಚಿಸಿದ್ದು, ಸಾವಿರಾರು ಕೋಟಿ ರೂ. ಮೊತ್ತದ ಈ ಹಗರಣ ಸೋಲಾರ್ ಹಗರಣವೆಂದೇ ಹೆಸರಾಗಿತ್ತು. ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ವಿರೋಧ ಪಕ್ಷಗಳ ಆಗ್ರಹವನ್ನು ಬದಿಗೊತ್ತಿದ್ದ ಮುಖ್ಯಮಂತ್ರಿ ಚಾಂಡಿ, ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರು.

  ಹಗರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಕಾರಣ ಚಾಂಡಿಯವರನ್ನು ಕಳೆದ ವರ್ಷ ಖುಲಾಸೆಗೊಳಿಸಲಾಗಿತ್ತು. ಆದರೆ ಚಾಂಡಿ ಹಾಗೂ 12 ಕಾಂಗ್ರೆಸ್ ರಾಜಕೀಯ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹಾಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳೆದ ವಿಧಾನಸಭೆ ಅಧಿವೇಶನದಲ್ಲಿ ಪ್ರಕಟಿಸಿದ್ದರು.

 ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ್ದ ಚಾಂಡಿ, ತಾನು ಯಾವ ತಪ್ಪನ್ನೂ ಎಸಗಿಲ್ಲ. ಈ ಪ್ರಕರಣದಲ್ಲಿ ತನ್ನನ್ನು ‘ಬ್ಲ್ಯಾಕ್ ಮೇಲ್’ ಮಾಡಲಾಗುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಉಲ್ಲೇಖಿಸಿದ್ದ ಬಿಜೆಪಿ ಕೇರಳ ಘಟಕಾಧ್ಯಕ್ಷ ಕೆ.ಸುರೇಂದ್ರನ್ ಪೊಲೀಸ್ ದೂರು ದಾಖಲಿಸಿದ್ದು ‘ಬ್ಲ್ಯಾಕ್ ಮೇಲ್’ ನಡೆಸಿದವರು ಯಾರೆಂದು ಕಂಡುಹುಡುಕಬೇಕೆಂದು ದೂರಿನಲ್ಲಿ ಕೋರಿದ್ದರು.

  ಮುಖ್ಯಮಂತ್ರಿ ಹುದ್ದೆಗೊಂದು ಘನತೆಯಿದೆ. ಅವರೇನೂ ಸಾಮಾನ್ಯ ವ್ಯಕ್ತಿಯಲ್ಲ. ಮುಖ್ಯಮಂತ್ರಿಯಾಗಿದ್ದವರನ್ನು ‘ಬ್ಲ್ಯಾಕ್ ಮೇಲ್’ ಮಾಡಲಾಗಿದೆ ಎಂದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೋರಿದ್ದರು. ಇದಾದ ಬಳಿಕ ಸ್ಪಷ್ಟನೆ ನೀಡಿದ್ದ ಚಾಂಡಿ, ತನ್ನನ್ನು ‘ಬ್ಲ್ಯಾಕ್ ಮೇಲ್’ ಮಾಡಿದವರು ರಾಜಕಾರಣಿಗಳಲ್ಲ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News