ಲಿಂಗ ತಾರತಮ್ಯದ ಹಿಂಸೆಯ ವಿರುದ್ಧ ಧ್ವನಿಯೆತ್ತಲು ವಿದ್ಯಾರ್ಥಿಗಳಿಗೆ ತರಬೇತಿ: ರಾಜ್ಯಗಳಿಗೆ ಕೇಂದ್ರ ಸೂಚನೆ

Update: 2018-01-10 14:33 GMT

ಹೊಸದಿಲ್ಲಿ,ಜ.10: ಶಾಲೆಗಳಲ್ಲಿ ಲಿಂಗ ತಾರತಮ್ಯದ ಹಿಂಸೆಯನ್ನು ತಡೆಯುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಾಜ್ಯಗಳಿಗೆ ಪತ್ರವನ್ನು ಬರೆದಿದ್ದು, ಇಂತಹ ಘಟನೆಗಳ ವಿರುದ್ಧ ಧ್ವನಿಯೆತ್ತಲು ಮತ್ತು ಅನುಸರಿಸಬೇಕಾದ ಸೂಕ್ತಕ್ರಮಗಳ ಬಗ್ಗೆ ಅರಿವು ಮೂಡಿಸಲು ವಿದ್ಯಾರ್ಥಿಗಳಿಗೆ ತರಬೇತಿ ದೊರೆಯುವಂತೆ ನೋಡಿಕೊಳ್ಳುವಂತೆ ಸೂಚಿಸಿದೆ.

ಆತ ಅಥವಾ ಆಕೆ ಲಿಂಗ ತಾರತಮ್ಯದ ಹಿಂಸೆಗೆ ಗುರಿಯಾದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾಡಬಹುದಾದ ಸಾಧ್ಯವಿರುವ ಪ್ರಯತ್ನಗಳ ವಿವರಗಳಿರುವ, ಯುನೆಸ್ಕೋ ಅಭಿವೃದ್ಧಿಗೊಳಿಸಿರುವ ಕೆಲವು ಪೋಸ್ಟರ್‌ಗಳನ್ನೂ ಸಚಿವಾಲಯವು ರಾಜ್ಯಗಳೊಂದಿಗೆ ಹಂಚಿಕೊಂಡಿದೆ.

ಶಾಲೆಗಳಲ್ಲಿನ ಲಿಂಗ ತಾರತಮ್ಯದ ಹಿಂಸೆಯು ಮಿಲಿಯಾಂತರ ಮಕ್ಕಳು, ಕುಟುಂಬಗಳು ಮತ್ತು ಸಮುದಾಯಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಶಾಲೆಗಳಲ್ಲಿ ಮತ್ತು ಅವುಗಳ ಸುತ್ತ ನಡೆಯುವ ಲೈಂಗಿಕ, ದೈಹಿಕ ಅಥವಾ ಮಾನಸಿಕ ಹಿಂಸೆಯ ಕೃತ್ಯ ಅಥವಾ ಬೆದರಿಕೆಗಳು ಇವುಗಳಲ್ಲಿ ಸೇರುತ್ತವೆ. ಶಾಲೆಗಳಲ್ಲಿ ಹಿಂಸೆಯು ವಿದ್ಯಾರ್ಥಿಗಳ ಆತ್ಮಗೌರವವನ್ನು ಕುಗ್ಗಿಸುವುದರಿಂದ ಹಿಡಿದು ಅವರ ಶೈಕ್ಷಣಿಕ ಹಿನ್ನಡೆ ಯವರೆಗೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತದೆ ಎಂದು ಸಚಿವಾಲಯವು ಪತ್ರದಲ್ಲಿ ತಿಳಿಸಿದೆ.

ಶಾಲೆಗಳಲ್ಲಿ ಹಿಂಸೆಯನ್ನು ನಿವಾರಿಸುವುದು ಸುರಕ್ಷಿತ ಮತ್ತು ನಿರ್ಭೀತ ಅಧ್ಯಯನ ವಾತಾವರಣಕ್ಕೆ ಮುಖ್ಯವಾಗಿದೆ ಮತ್ತು ಎಲ್ಲ ವಿದ್ಯಾರ್ಥಿಗಳಿಗೆ ಮಹತ್ವದ್ದಾಗಿದೆ ಎಂದೂ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News