‘ಆಧಾರ್’ ಹೊಂದಿರದ ವ್ಯಕ್ತಿ ಅಸ್ತಿತ್ವದಲ್ಲೇ ಇಲ್ಲ ಎಂದು ಪರಿಗಣಿಸಿದ್ದೀರಾ:ಸರಕಾರಕ್ಕೆ ಸುಪ್ರೀಂ ಪ್ರಶ್ನೆ

Update: 2018-01-10 15:23 GMT

ಹೊಸದಿಲ್ಲಿ, ಜ.10: ವಸತಿಯ ವಿಳಾಸ ಇಲ್ಲದ ವ್ಯಕ್ತಿ ಆಧಾರ್ ಕಾರ್ಡ್ ಪಡೆಯಲು ಹೇಗೆ ಸಾಧ್ಯ. ಹಾಗಾದರೆ ಆಧಾರ್ ಹೊಂದಿರದ ವ್ಯಕ್ತಿಯನ್ನು ಅಸ್ತಿತ್ವದಲ್ಲೇ ಇಲ್ಲದ ವ್ಯಕ್ತಿ ಎಂದು ಸರಕಾರ ಪರಿಗಣಿಸಿದೆಯೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

ದೇಶದಾದ್ಯಂತ ವಸತಿ ರಹಿತರಿಗೆ ರಾತ್ರಿ ಉಳಿದುಕೊಳ್ಳುವ ಆಶ್ರಯತಾಣ ನಿರ್ಮಿಸುವ ವಿಷಯದ ಕುರಿತ ಅರ್ಜಿಯ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರು ಈ ಪ್ರಶ್ನೆ ಎತ್ತಿದರು.

ಉತ್ತರಪ್ರದೇಶ ಸರಕಾರವನ್ನು ಪ್ರತಿನಿಧಿಸಿದ ವಕೀಲರೊಬ್ಬರು, ರಾತ್ರಿ ಆಶ್ರಯತಾಣಕ್ಕೆ ಜನರನ್ನು ಸೇರಿಸಿಕೊಳ್ಳುವ ಸಂದರ್ಭ ಆಧಾರ್‌ನಂತಹ ಗುರುತುಪತ್ರಗಳನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದಾಗ ಸುಪ್ರೀಂಕೋರ್ಟ್ ನ್ಯಾಯಾಧೀಶರು ಈ ಮೇಲಿನಂತೆ ಪ್ರತಿಕ್ರಿಯಿಸಿದರು. ಆಗ ಉತ್ತರಪ್ರದೇಶ ಸರಕಾರದ ವಕೀಲರು, ಮತದಾರರ ಗುರುತುಪತ್ರದಂತಹ ಇತರ ಗುರುತು ಕಾರ್ಡ್‌ಗಳೂ ಇವೆ ಎಂದುತ್ತರಿಸಿದರು.

ಈ ಹೇಳಿಕೆಯ ಬಗ್ಗೆ ಮತ್ತೊಮ್ಮೆ ಕಟು ಪ್ರತಿಕ್ರಿಯೆ ನೀಡಿದ ನ್ಯಾಯಾಧೀಶರು, ಮತದಾರರ ಗುರುತು ಚೀಟಿಗೆ ವಿಳಾಸದ ಪುರಾವೆಯ ಅಗತ್ಯವಿದೆ. ಮನೆಯೇ ಇಲ್ಲದ ವ್ಯಕ್ತಿ ವಿಳಾಸದ ಪುರಾವೆ ನೀಡುವುದು ಸಾಧ್ಯವೇ ಎಂದು ಪ್ರಶ್ನಿಸಿದರು. ಅಲ್ಲದೆ ದೇಶದಲ್ಲಿ ಆಧಾರ್ ಕಾರ್ಡ್ ಹೊಂದಿರುವ ಜನರೆಷ್ಟು ಎಂಬ ಮಾಹಿತಿ ನೀಡುವಂತೆಯೂ ಉಚ್ಛ ನ್ಯಾಯಾಲಯ ತಿಳಿಸಿತು.

 ಇದಕ್ಕೆ ಉತ್ತರಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್, 90 ಕೋಟಿ ಜನತೆ ಆಧಾರ್ ಕಾರ್ಡ್ ಹೊಂದಿದ್ದು, ಬ್ಯಾಂಕ್ ಖಾತೆ, ಮೊಬೈಲ್ ಫೋನ್‌ಗಳಿಗೆ ಹಾಗೂ ಸರಕಾರದ ಸವಲತ್ತುಗಳನ್ನು ಪಡೆಯಲು ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಜೋಡಿಸಬೇಕೆಂದು ಸರಕಾರ ತಿಳಿಸಿದೆ ಎಂದರು.

17ರಂದು ವಿಚಾರಣೆ

ಆಧಾರ್‌ನ ಮಾಹಿತಿ ಸುರಕ್ಷಿತವಾಗಿಲ್ಲ . 500 ರೂ. ಪಾವತಿಸಿದರೆ ವ್ಯಕ್ತಿಗಳ ವೈಯಕ್ತಿಕ ಮಾಹಿತಿ ಲಭ್ಯವಾಗುತ್ತದೆ ಎಂದು ‘ ದಿ ಟ್ರಿಬ್ಯೂನ್’ ಪತ್ರಿಕೆಯಲ್ಲಿ ವರದಿಯಾದ ಬಳಿಕ, ಆಧಾರ್ ಕಾರ್ಡ್‌ನ ಸಿಂಧುತ್ವವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಜನವರಿ 17ರಂದು ಈ ಅರ್ಜಿಯ ವಿಚಾರಣೆ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News