ದಕ್ಷಿಣದೊಂದಿಗೆ ಪರಮಾಣು ಅಸ್ತ್ರಗಳ ಬಗ್ಗೆ ಚರ್ಚೆಯಿಲ್ಲ: ಉತ್ತರ ಕೊರಿಯ

Update: 2018-01-10 18:13 GMT

ಸಿಯೋಲ್ (ದಕ್ಷಿಣ ಕೊರಿಯ), ಜ. 10: ದಕ್ಷಿಣ ಕೊರಿಯದ ಜೊತೆಗಿನ ಮಾತುಕತೆಯಲ್ಲಿ ತಾನು ಪರಮಾಣು ಅಸ್ತ್ರಗಳ ವಿಷಯವನ್ನು ಮಾತನಾಡುವುದಿಲ್ಲ, ಯಾಕೆಂದರೆ, ಪರಮಾಣು ಅಸ್ತ್ರಗಳು ಇರುವುದು ಅಮೆರಿಕವನ್ನು ಎದುರಿಸಲು ಮಾತ್ರ, ತನ್ನ ‘ಸಹೋದರ’ ದಕ್ಷಿಣ ಕೊರಿಯವನ್ನಲ್ಲ ಎಂದು ಉತ್ತರ ಕೊರಿಯ ಹೇಳಿದೆ.

ದಕ್ಷಿಣ ಕೊರಿಯದೊಂದಿಗೆ ಮಂಗಳವಾರ 11 ಗಂಟೆಗಳ ಕಾಲ ಶಾಂತಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರ ಕೊರಿಯದ ಪ್ರಮುಖ ಸಂಧಾನಕಾರ ರಿ ಸೊನ್ ಗ್ವೊನ್ ಈ ರೀತಿ ಹೇಳಿದರು.

ಮಾತುಕತೆಯ ವೇಳೆ, ಕೊರಿಯ ಪರ್ಯಾಯ ದ್ವೀಪವನ್ನು ಪರಮಾಣುಮುಕ್ತಗೊಳಿಸಬೇಕು ಎಂಬ ಪ್ರಸ್ತಾಪವನ್ನು ದಕ್ಷಿಣ ಕೊರಿಯ ಮುಂದಿಟ್ಟಿತಾದರೂ, ಉತ್ತರ ಕೊರಿಯ ಅದಕ್ಕೆ ‘ಬಲವಾದ ಆಕ್ಷೇಪ’ ವ್ಯಕ್ತಪಡಿಸಿತು.

ಉಭಯ ದೇಶಗಳ ನಡುವಿನ ವಿವಾದಗಳ ಬಗ್ಗೆ ಮಾತನಾಡಲು ಹಾಗೂ ಆಕಸ್ಮಿಕ ಸಂಘರ್ಷವನ್ನು ತಡೆಯುವ ಬಗ್ಗೆ ಚರ್ಚಿಸಲು ಮತ್ತೊಮ್ಮೆ ಸಭೆ ಸೇರಲು ಉಭಯ ದೇಶಗಳು ಒಪ್ಪಿವೆಯಾದರೂ, ಆ ಸಭೆಯಲ್ಲಿ ನಿಶ್ಶಸ್ತ್ರೀಕರಣದ ಬಗ್ಗೆ ಮಾತನಾಡುವುದಿಲ್ಲ ಎಂದು ಉತ್ತರ ಕೊರಿಯ ಹೇಳಿದೆ.

ಪರಮಾಣುಮುಕ್ತತೆ ಶಾಂತಿಗೆ ರಹದಾರಿ: ದ. ಕೊರಿಯ

ಕೊರಿಯ ಪರ್ಯಾಯ ದ್ವೀಪವನ್ನು ಪರಮಾಣುಮುಕ್ತಗೊಳಿಸುವುದು ‘ಶಾಂತಿಗೆ ರಹದಾರಿಯಾಗಿದೆ ಹಾಗೂ ನಮ್ಮ ಗುರಿಯಾಗಿದೆ’ ಎಂದು ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ ಇನ್ ಬುಧವಾರ ಹೇಳಿದ್ದಾರೆ.

‘‘ಶಾಂತಿಯುತ ಒಲಿಂಪಿಕ್ಸ್ ನಡೆಸುವ ನಮ್ಮ ಪ್ರಯತ್ನಗಳನ್ನು ನಾವು ಮುಂದುವರಿಸಬೇಕಾಗಿದೆ’’ ಎಂದು ಉತ್ತರ ಮತ್ತು ದಕ್ಷಿಣ ಕೊರಿಯಗಳ ನಡುವಿನ ಮಾತುಕತೆಯ ಒಂದು ದಿನದ ಬಳಿಕ ಬುಧವಾರ ಸುದ್ದಿಗಾರರೊಂದಿಗೆ ಮತನಾಡಿದ ಅವರು ನುಡಿದರು.

‘‘ಉತ್ತರ ಕೊರಿಯದ ಪರಮಾಣು ಸಮಸ್ಯೆಯನ್ನು ನಾವು ಶಾಂತಿಯುತವಾಗಿ ಇತ್ಯರ್ಥಪಡಿಸಬೇಕಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News