ಉತ್ತರಪ್ರದೇಶ: ಕ್ರೈಸ್ತ ಧರ್ಮ ಪ್ರಚಾರ ಆರೋಪದಲ್ಲಿ ಮೂವರ ಬಂಧನ
Update: 2018-01-11 21:21 IST
ಶಹಜಹಾನ್‌ಪುರ, ಜ.11: ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಮೂವರು ನೇಪಾಳಿ ನಾಗರಿಕರನ್ನು ಬಂಧಿಸಿರುವುದಾಗಿ ಗುರುವಾರದಂದು ಪೊಲೀಸರು ತಿಳಿಸಿದ್ದಾರೆ. ನೇಪಾಳದ ಮಕ್ವನ್‌ಪುರ ನಿವಾಸಿಯಾಗಿರುವ ಶುಕ್ರ ರೈ, ಸಿಂದುಪಾಲ್ ಚೌಕ್ ನಿವಾಸಿಗಳಾದ ಇಂದ್ರ ಬಹದ್ದೂರ್ ಮತ್ತು ಮೆಕ್ ಬಹದ್ದೂರ್ ಬಂಧಿತ ಆರೋಪಿಗಳಾಗಿದ್ದಾರೆ.
ಮೂರು ದಿನಗಳ ಹಿಂದೆ ಜಿಲ್ಲೆಗೆ ಆಗಮಿಸಿದ ಆರೋಪಿಗಳು ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡುತ್ತಿದ್ದಾರೆ ಮತ್ತು ಒಸ್ಮಾನಾಬಾಗ್‌ನಲ್ಲಿ ಕೆಲವು ಪುಸ್ತಕಗಳನ್ನು ಹಂಚುತ್ತಿದ್ದಾರೆ ಎಂದು ಬುಧವಾರದಂದು ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ಈ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರು ಆರೋಪಿಗಳನ್ನು ತಡೆದಾಗ ಅವರ ಜೊತೆ ವಾಗ್ವಾದಕ್ಕಿಳಿದ ಆರೋಪಿಗಳು ಹಿಂದೂ ದೇವತೆಗಳ ಬಗ್ಗೆ ಕೀಳು ಮಾತುಗಳನ್ನು ಆಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.