ಆಧಾರ್ ಆಧಾರಿತ ಪರಿಶೀಲನೆ: ಏರ್‌ಟೆಲ್‌ಗೆ ಅನುಮತಿ ನೀಡಿದ ಪ್ರಾಧಿಕಾರ

Update: 2018-01-11 15:53 GMT

ಹೊಸದಿಲ್ಲಿ, ಜ.11: ತನ್ನ ಮೊಬೈಲ್ ಗ್ರಾಹಕರ ಮರುಪರಿಶೀಲನೆಯನ್ನು ನಡೆಸಲು ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆಯನ್ನು ಬಳಸಿಕೊಳ್ಳಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಭಾರ್ತಿ ಏರ್‌ಟೆಲ್‌ಗೆ ಮಾರ್ಚ್ 31ರ ವರೆಗೆ ಅನುಮತಿ ನೀಡಿದೆ.

ಏರ್‌ಟೆಲ್ ಪಾವತಿ ಬ್ಯಾಂಕ್ ಖಾತೆಗೆ ಅನಪೇಕ್ಷಿತವಾಗಿ ವರ್ಗಾವಣೆಯಾಗಿದ್ದ 138 ಕೋಟಿ ರೂ. ಎಲ್‌ಪಿಜಿ ಸಬ್ಸಿಡಿ ಹಣವನ್ನು ಕಂಪೆನಿಯು ವಾಪಸ್ ನೀಡಿದ ನಂತರ ಕಳೆದ ತಿಂಗಳು ಏರ್‌ಟೆಲ್‌ಗೆ ತನ್ನ ಗ್ರಾಹಕರ ಮರುಪರಿಶೀಲನೆ ನಡೆಸಲು ಪ್ರಾಧಿಕಾರವು ಜನವರಿ 10ರ ವರೆಗೆ ಕಾಲಾವಕಾಶ ನೀಡಿತ್ತು. ಆದರೆ ಏರ್‌ಟೆಲ್ ಪಾವತಿ ಬ್ಯಾಂಕ್‌ನ ಇಕೆವೈಸಿ ಪರವಾನಿಗೆಯು ಅಂತಿಮ ತನಿಖೆ ಮತ್ತು ಆಡಿಟ್ ಮುಗಿಯುವವರೆಗೆ ಅಮಾನತಿನಲ್ಲಿರುತ್ತದೆ ಎಂದು ಪ್ರಾಧಿಕಾರ ತಿಳಿಸಿರುವುದಾಗಿ ಆಂಗ್ಲ ಪತ್ರಿಕೆ ವರದಿ ಮಾಡಿದೆ.

ತನ್ನ ಮೊಬೈಲ್ ಗ್ರಾಹಕರ ಅನುಮತಿಯನ್ನು ಪಡೆಯದೆ ಪಾವತಿ ಬ್ಯಾಂಕ್ ಖಾತೆಗಳನ್ನು ತೆರೆದ ಕಾರಣಕ್ಕಾಗಿ ಸುನಿಲ್ ಮಿತ್ತಲ್ ಮಾಲಕತ್ವದ ಏರ್‌ಟೆಲ್ ಮತ್ತು ಏರ್‌ಟೆಲ್ ಪಾವತಿ ಬ್ಯಾಂಕ್ ವಿರುದ್ಧ ಸಾರ್ವತ್ರಿಕ ಟೀಕೆಗಳು ವ್ಯಕ್ತವಾಗಿದ್ದವು. ಕಂಪೆನಿಯ ಈ ನಡೆಯಿಂದಾಗಿ ಕೋಟ್ಯಂತರ ರೂ. ಎಲ್‌ಪಿಜಿ ಸಬ್ಸಿಡಿ ಏರ್‌ಟೆಲ್ ಖಾತೆಗೆ ವರ್ಗಾವಣೆಯಾಗಿತ್ತು. ಕೂಡಲೇ ಮಧ್ಯಪ್ರವೇಶಿಸಿದ ಯುಐಡಿಎಐ, ಏರ್‌ಟೆಲ್ ಸಂಸ್ಥೆ ಇಕೆವೈಸಿ ಬಳಸಿ ತನ್ನ ಮೊಬೈಲ್ ಗ್ರಾಹಕರ ಆಧಾರ್ ಆಧಾರಿತ ಸಿಮ್ ಪರಿಶೀಲನೆ ನಡೆಸುವುದನ್ನು ಮತ್ತು ಪಾವತಿ ಬ್ಯಾಂಕ್ ಗ್ರಾಹಕರ ಇಕೆವೈಸಿಯನ್ನು ನಿರ್ಬಂಧಿಸಿತ್ತು.

ಆದರೆ ಗ್ರಾಹಕರ ಅನುಕೂಲವನ್ನು ಗಮನದಲ್ಲಿಟ್ಟು ಮತ್ತು ಸರ್ವೋಚ್ಛ ನ್ಯಾಯಾಲಯ ನೀಡಿರುವ ಮಾರ್ಚ್ 31ರ ಗಡುವು ಸಮೀಪಿಸುತ್ತಿರುವ ಕಾರಣದಿಂದ ಪ್ರಾಧಿಕಾರವು, ಜನವರಿ 10ರವರೆಗೆ ಭಾರ್ತಿ ಏರ್‌ಟೆಲ್‌ಗೆ ತನ್ನ ಮೊಬೈಲ್ ಗ್ರಾಹಕರ ಆಧಾರ್ ಆಧಾರಿತ ಮರುಪರಿಶೀಲನೆ ನಡೆಸಲು ಅನುಮತಿ ನೀಡಿತ್ತು. ಏರ್‌ಟೆಲ್ ಮಾಡಿದ ಈ ತಪ್ಪು ಮರುಕಳಿಸದಂತೆ ನೋಡಿಕೊಳ್ಳಲು ಸರಕಾರದ ಸಬ್ಸಿಡಿ ಯಾವ ಖಾತೆಗೆ ವರ್ಗಾವಣೆಯಾಗಬೇಕೆಂಬುದನ್ನು ಬ್ಯಾಂಕ್‌ಗಳು ಗ್ರಾಹಕರಿಂದ ಸ್ಪಷ್ಟವಾದ ಒಪ್ಪಿಗೆಯನ್ನು ಕೇಳಬೇಕು ಎಂದು ನಿರ್ದೇಶನ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News