1984ರ ಸಿಖ್ ದಂಗೆ: ಹೊಸ ವಿಶೇಷ ತನಿಖಾ ತಂಡ ರಚಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ, ಜ.11: 1984ರಲ್ಲಿ ನಡೆದ ಸಿಖ್ ದಂಗೆಯ 186 ಪ್ರಕರಣಗಳ ತನಿಖೆ ನಡೆಸಲು ಸರ್ವೋಚ್ಛ ನ್ಯಾಯಾಲಯವು ನಿವೃತ್ತ ದಿಲ್ಲಿ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಎಸ್.ಎನ್. ದಿಂಗ್ರ ಅವರ ನೇತೃತ್ವದಲ್ಲಿ ತ್ರಿಸದಸ್ಯ ವಿಶೇಷ ತನಿಖಾ ತಂಡವನ್ನು ರಚಿಸಿದೆ. ದಿಂಗ್ರ ಅವರ ಜೊತೆಗೆ ನಿವೃತ್ತ ಪ್ರಧಾನ ಪೊಲೀಸ್ ನಿರೀಕ್ಷಕ ದರ್ಜೆಯ ಅಧಿಕಾರಿ ರಾಜದೀಪ್ ಸಿಂಗ್ ಮತ್ತು ಸೇವಾನಿರತ ಐಪಿಎಸ್ ಅಧಿಕಾರಿ ಅಭಿಷೇಕ್ ದುಲರ್ ಈ ವಿಶೇಷ ತಂಡದ ಸದಸ್ಯರಾಗಿದ್ದಾರೆ. ಎರಡು ತಿಂಗಳೊಳಗಾಗಿ ವರದಿಯನ್ನು ಒಪ್ಪಿಸುವಂತೆ ಸರ್ವೋಚ್ಛ ನ್ಯಾಯಾಲಯವು ತಂಡಕ್ಕೆ ಸೂಚನೆ ನೀಡಿದೆ. ಈ ಸಂಬಂಧ ವಿಚಾರಣೆಯನ್ನು ಮಾರ್ಚ್ 19ರಂದು ನಡೆಸಲಾಗುವುದು. ಈ ಹಿಂದಿನ ವಿಶೇಷ ತನಿಖಾ ತಂಡವು 186 ಪ್ರಕರಣಗಳಲ್ಲಿ ಸರಿಯಾದ ತನಿಖೆಯನ್ನು ನಡೆಸದೆ ಅವುಗಳ ಅಂತಿಮ ವರದಿಯನ್ನು ಸಲ್ಲಿಸಿದೆ ಎಂದು ಬುಧವಾರದಂದು ನ್ಯಾಯಾಲಯ ತಿಳಿಸಿತ್ತು. 1984ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯ ಹತ್ಯೆಯ ನಂತರ ಭುಗಿಲೆದ್ದ ಸಿಖ್ ವಿರೋಧಿ ದಂಗೆಗಳಲ್ಲಿ ದಿಲ್ಲಿಯೊಂದರಲ್ಲೇ 2,733 ಮಂದಿ ಸಾವನ್ನಪ್ಪಿದ್ದರು.