ಅನಿವಾಸಿ ಕನ್ನಡಿಗರಿಗಾಗಿ ಕರ್ನಾಟಕದಲ್ಲಿ ವಿದೇಶ ಭವನ: ಸುಶ್ಮಾ ಸ್ವರಾಜ್ ಭರವಸೆ

Update: 2018-01-11 16:22 GMT

ಹೊಸದಿಲ್ಲಿ, ಜ.11: ‘ಪ್ರವಾಸಿ ಭಾರತೀಯ ದಿವಸ್’ ಅಂಗವಾಗಿ ಅನಿವಾಸಿ ಭಾರತೀಯರ ಕುರಿತು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಅಧ್ಯಕ್ಷತೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಜ.10ರಂದು ಹೊಸದಿಲ್ಲಿಯ ಕೇಂದ್ರೀಯ ಸದನದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿಯ ಪರವಾಗಿ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷ ಡಾ. ಆರತಿ ಕೃಷ್ಣ ಪ್ರತಿನಿಧಿಸಿದ್ದರು.
ಸಭೆಯಲ್ಲಿ ಮಾತನಾಡಿದ ಡಾ. ಆರತಿ ಕೃಷ್ಣ, ಕರ್ನಾಟಕದಿಂದ ವಿದೇಶಗಳಿಗೆ ತೆರಳಿರುವ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ವಿದೇಶ ಭವನವನ್ನು ಸ್ಥಾಪಿಸುವ ಬೇಡಿಕೆಯನ್ನು ಸಭೆಯ ಮುಂದಿಟ್ಟರು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಸಚಿವೆ ಸುಶ್ಮಾ ಸ್ವರಾಜ್, ಕರ್ನಾಟಕದಲ್ಲಿ ವಿದೇಶಿ ಭವನ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಭೆಯಲ್ಲಿ ಅನಿವಾಸಿ ಭಾರತೀಯರ ಕುರಿತಾದ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರ ಕಲ್ಪಿಸುವ ಬಗ್ಗೆ ಚರ್ಚೆ ನಡೆಯಿತು. ಭಾರತದಿಂದ ಉದ್ಯೋಗಸ್ಥ ಅನಿವಾಸಿ ಭಾರತೀಯರು ಅದರಲ್ಲೂ ಕಾರ್ಮಿಕ ವರ್ಗದ ಅಭ್ಯರ್ಥಿಗಳು ಸುಮಾರು 20 ಲಕ್ಷದಷ್ಟಿದ್ದಾರೆ. ಈ ಪೈಕಿ ಹೆಚ್ಚಿನವರು ಕೊಲ್ಲಿ ರಾಷ್ಟ್ರಗಳಲ್ಲಿದ್ದಾರೆ. ಇವರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೇಮಕಾತಿ ಸಂಸ್ಥೆಗಳ ಮುಂಗಡ ಠೇವಣಿಯನ್ನು 20 ಲಕ್ಷ ರೂ. ನಿಂದ 50 ಲಕ್ಷ ರೂ.ಗೆ ಏರಿಸಲಾಗಿದೆ. ನೇಮಕಾತಿ ಸಂಸ್ಥೆಗಳು ತಮ್ಮ ಜವಾಬ್ದಾರಿ ನಿರ್ವಹಣೆಯಲ್ಲಿ ಅಸಡ್ಡೆ ತೋರಿದರೆ ಈ ಮುಂಗಡ ಠೇವಣಿಯಿಂದ ಸಂತ್ರಸ್ತರಿಗೆ ಪರಿಹಾರದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ಕಾನೂನು ಬಾಹಿರ ನೇಮಕಾತಿ ಸಂಸ್ಥೆಗಳ ಬಗ್ಗೆ ಜನಜಾಗೃತಿಗಾಗಿ ವಿದೇಶ ಮಂತ್ರಾಲಯವು ‘ಸುರಕ್ಷಿತ್ ಜಯನ್ ಪರ್ ಶಿಕ್ಷಿತ್ ಜಯನ್’ ಎಂಬ ಘೋಷ ವಾಕ್ಯದಡಿ ಜಾಗೃತಿ ಅಭಿಯಾನ ಆರಂಭಿಸಿದೆ.

ದಕ್ಷಿಣ ಸೂಡಾನ್, ಯೆಮನ್ ಮತ್ತು ಇರಾಕ್‌ನಂತಹ ಯುದ್ಧ ಭೀತಿ ಇರುವ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಿವಾಸಿ ಭಾರತೀಯರಿಗೆ ತಕ್ಷಣ ನೆರವಾಗುವ ಉದ್ದೇಶದಿಂದ ಸಂಬಂಧಪಟ್ಟ ದೇಶಗಳ ರಾಯಭಾರಿ ಕಚೇರಿಗಳಲ್ಲಿ 24X7 ಸಹಾಯವಾಣಿ ಆರಂಭಿಸಲಾಗಿದೆ.

ವಿದೇಶಕ್ಕೆ ಉದ್ಯೋಗವನ್ನರಸಿ ತೆರಳುವಂತಹ ವಿದ್ಯಾವಂತ ಯುವಕರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರಕಾರವು ಕೌಶಲ್ಯ ಅಭಿವೃದ್ಧಿ ಇಲಾಖೆ ಯೊಂದಿಗೆ ವಿದೇಶಿ ಮಂತ್ರಾಲಯವು ‘ಪ್ರವಾಸಿ ಕೌಶಲ್ ವಿಕಾಸ್ ಯೋಜನಾ’ ಎಂಬ ಘೋಷವಾಕ್ಯದಡಿ ಒಡಂಬಡಿಕೆ ಮಾಡಿಕೊಂಡಿದೆ.

ಉದ್ಯೋಗಾಸಕ್ತ ಮಹಿಳಾ ಅಭ್ಯರ್ಥಿಗಳನ್ನು ಕೆಲಸ ನಿಮಿತ್ತ ವಿದೇಶಕ್ಕೆ ಅದರಲ್ಲೂ ಕೊಲ್ಲಿ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ನೇಮಕಾತಿ ಸಂಸ್ಥೆಗಳು ಅಂತಹ ಹೆಣ್ಮಕ್ಕಳ ಹೆಸರಿನಲ್ಲಿ 2500 ಅಮೆರಿಕನ್ ಡಾಲರ್ ಠೇವಣಿ ಇಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸಭೆಯಲ್ಲಿ ಅಕಾರಿಗಳು ಮಾಹಿತಿ ನೀಡಿದರು.

ಡಾ.ಆರತಿ ಕೃಷ್ಣ ಮಾತನಾಡಿ, ವಿದೇಶಗಳಲ್ಲಿ ಉದ್ಯೋಗ ನಿಮಿತ್ತ ತೆರಳುವ ಅನಿವಾಸಿ ಭಾರತೀಯರಿಗೆ ಅಲ್ಲಿ ಆರೋಗ್ಯ ಸಮಸ್ಯೆ, ಸಾವು-ನೋವುಗಳಂತಹ ಸಮಸ್ಯೆ ಉಂಟಾದಲ್ಲಿ ವಿಮೆ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಶ್ಮಾ ಸ್ವರಾಜ್, ಶೀಘ್ರದಲ್ಲೇ ಪ್ರವಾಸಿ ವಿಮೆ ಯೋಜನೆ ಜಾರಿಗೆ ಬರಲಿದ್ದು, ಅದರಲ್ಲಿ ಈ ವಿಚಾರವನ್ನು ಸೇರಿಸುವುದಾಗಿ ತಿಳಿಸಿದರು.

ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಕಾರ್ಯಪ್ರವೃತ್ತವಾಗಿರುವ ಕೆಲವು ಕಾನೂನು ಬಾಹಿರ ಸಂಸ್ಥೆಗಳಿಂದ ಅಮಾಯಕ ಯುವಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಇದನ್ನು ತಡೆಗಟ್ಟಲು ರಾಜ್ಯ ಸರಕಾರವೇ ನೇಮಕ ಸಂಸ್ಥೆಗಳನ್ನು ಆರಂಭಿಸಲು ಅನುಮತಿ ನೀಡಬೇಕು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷೆ, ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ 13 ಕಾನೂನುಬಾಹಿರ ನೇಮಕಾತಿ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಬೆಂಗಳೂರಿನ ಪಾಸ್‌ಪೋರ್ಟ್ ಕಚೇರಿಯಲ್ಲಿ ಪ್ರಾಟೆಕ್ಟರ್ ಆಫ್ ಎಮೆಗ್ರೆಂಟ್ಸ್ ಕಚೇರಿ ಆರಂಭಿಸಲು ಅನುಮತಿ ನೀಡುವಂತೆ ಇದೇ ಸಂದರ್ಭ ಡಾ.ಆರತಿಕೃಷ್ಣ ಕೋರಿದರು.

ಸಭೆಯಲ್ಲಿ ವಿದೇಶಾಂಗ ಖಾತೆಯ ರಾಜ್ಯ ಸಚಿವರಾದ ವಿ.ಕೆ.ಸಿಂಗ್, ಎಂ.ಜೆ.ಅಕ್ಬರ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್, ಎಲ್ಲಾ ರಾಜ್ಯಕ್ಕೆ ಸಂಬಂಧಿಸಿದ ಸಚಿವರು, ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News