ನಗರೀಕರಣದ ಚೀನಾ ಮಾದರಿಯನ್ನು ಭಾರತವು ಅನುಸರಿಸಬಾರದು:ನೀತಿ ಆಯೋಗ

Update: 2018-01-11 16:36 GMT

ಹೊಸದಿಲ್ಲಿ,ಜ.11: ಚೀನಾದಲ್ಲಿ ನಗರೀಕರಣದಂತಹ ವಿದೇಶಿ ಮಾದರಿಗಳನ್ನು ಭಾರತವು ನಕಲು ಮಾಡಬಾರದು ಎಂದು ಗುರುವಾರ ಇಲ್ಲಿ ಹೇಳಿದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ ಕುಮಾರ್ ಅವರು, ದೇಶಾದ್ಯಂತ ಪ್ರಗತಿ ಕೇಂದ್ರಗಳನ್ನು ಸೃಷ್ಟಿಸುವ ಅಗತ್ಯವಿದೆ ಎಂದು ತಿಳಿಸಿದರು.

ನಮ್ಮ ನಗರೀಕರಣ ಯೋಜನೆಗಳಿಗಾಗಿ ನಾವು ವಿದೇಶಿ ಮಾದರಿಗಳತ್ತ ನೋಡಬೇಕಾದ ಅಗತ್ಯವಿಲ್ಲ. ನಮ್ಮ ವಿವಿಧತೆ ಮತ್ತು ಬಹುತ್ವಗಳನ್ನು ಪರಿಗಣಿಸಿದರೆ ನಾವು ಭಾರತದಲ್ಲಿ ಅಸಂತುಲಿತ ನಗರೀಕರಣಕ್ಕೆ ಅವಕಾಶ ನೀಡುವಂತಿಲ್ಲ. ಚೀನಾವನ್ನು ನಕಲು ಮಾಡಲು ನಾವು ಭಾರತಕ್ಕೆ ಅವಕಾಶ ನೀಡುವ ಹಾಗಿಲ್ಲ ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕುಮಾರ್ ಹೇಳಿದರು.

ಚೀನಾದಲ್ಲಿ ಕರಾವಳಿಯಲ್ಲಿ ಅಭಿವೃದ್ಧಿ,ಆಧುನೀಕರಣ ನಡೆದಿದೆ,ಆದರೆ ಇತರ ಪ್ರದೇಶಗಳು ಹಿಂದುಳಿದಿವೆ ಎಂದು ಬೆಟ್ಟುಮಾಡಿದ ಅವರು, ಇದರ ಪರಿಣಾಮಮವಾಗಿ ಪ್ರತಿ ಚೀನಿ ಹೊಸ ವರ್ಷದಂದು 4-5 ಮಿಲಿಯನ್ ಚೀನಿಯರು ಕರಾವಳಿಯಿಂದ ಒಳನಾಡುಗಳಿಗೆ ತೆರಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದು ನಮ್ಮ ದೇಶದಲ್ಲಿ ಸಂಭವಿಸಲು ಅವಕಾಶ ನೀಡಬಾರದು. ಹಬ್ಬ ಹರಿದಿನಗಳಲ್ಲಿ ನಮ್ಮ ಜನರು ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹೋಗುವಂತಾಗಬಾರದು ಎಂದರು.

ಭಾರತವು ಇನ್ನೂ ಸಬಲೀಕೃತ ನಗರಗಳನ್ನು ಹೊಂದಿಲ್ಲ ಎಂದ ಅವರು, ನಗರಗಳಲ್ಲಿ ಪ್ರಬಲ ಮೇಯರ್‌ಗಳನ್ನು ಹೊಂದಿರುವ ಹಳೆಯ ಸಂಪ್ರದಾಯಕ್ಕೆ ಮರುಜೀವ ನೀಡುವ ಅಗತ್ಯವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News