ನಾಲ್ವರು ಅತ್ಯಂತ ನಿಷ್ಠಾವಂತ ನ್ಯಾಯಾಧೀಶರು, ಪ್ರಧಾನಿ ಮಧ್ಯಪ್ರವೇಶಿಸಲಿ: ಸುಬ್ರಮಣಿಯನ್ ಸ್ವಾಮಿ

Update: 2018-01-12 13:01 GMT

ಹೊಸದಿಲ್ಲಿ,ಜ.12: ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸರ್ವೋಚ್ಚ ನ್ಯಾಯಾಲಯದ ನಾಲ್ವರು ನ್ಯಾಯಾಧೀಶರು ಶುಕ್ರವಾರ ಸುದ್ದಿಗೋಷ್ಠಿಯನ್ನು ಕರೆದು ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ಎಲ್ಲವೂ ಕ್ರಮಬದ್ಧವಾಗಿಲ್ಲ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು, ಪ್ರಧಾನಿ ನರೇಂದ್ರ ಮೋದಿಯವರ ಮಧ್ಯ ಪ್ರವೇಶಕ್ಕೆ ಆಗ್ರಹಿಸಿದ್ದಾರೆ. ನ್ಯಾಯಾಧೀಶರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಗಂಭೀರ ದೂರುಗಳನ್ನು ಹೇಳಿಕೊಂಡಿದ್ದರು.

ಈ ನಾಲ್ವರು ನ್ಯಾಯಾಧೀಶರನ್ನು ನಾವು ಟೀಕಿಸುವಂತಿಲ್ಲ. ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿಗಳಾಗಿದ್ದಾರೆ. ಹಿರಿಯ ನ್ಯಾಯವಾದಿಗಳಾಗಿ ಅವರು ಬಹಳಷ್ಟು ಹಣವನ್ನು ಸಂಪಾದಿಸಬಹುದಿತ್ತು. ಆದರೆ ಅವರು ತಮ್ಮ ನ್ಯಾಯಾಂಗ ವೃತ್ತಿಗಾಗಿ ಬಹಳಷ್ಟು ತ್ಯಾಗ ಮಾಡಿದ್ದಾರೆ. ನಾವು ಅವರನ್ನು ಗೌರವಿಸಬೇಕು. ಈಗ ಈ ನಾಲ್ವರು ನ್ಯಾಯಾಧೀಶರು ವಿಷಯಗಳನ್ನೆತ್ತಿರುವಾಗ ಆಡಳಿತದ ಮುಖ್ಯಸ್ಥರಾಗಿ ಪ್ರಧಾನಿಯವರು ಮಧ್ಯ ಪ್ರವೇಶ ಮಾಡಬೇಕು ಎಂದು ಹೇಳಿದರು.

ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಈ ಹಿರಿಯ ನ್ಯಾಯಾಧೀಶರು ಮಹತ್ವದ ಹೆಜ್ಜೆಯನ್ನಿರಿಸಿದ್ದಾರೆ. ಈ ನಾಲ್ವರು ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಮೂರ್ತಿಗಳು, ವಸ್ತುಶಃ ಇಡೀ ಸರ್ವೋಚ್ಚ ನ್ಯಾಯಾಲಯವು ಏಕಾಭಿಪ್ರಾಯವನ್ನು ಹೊಂದಿರಬೇಕು ಮತ್ತು ಅದು ಹಾಗೆಯೇ ಮುಂದುವರಿಯಬೇಕು ಎಂದು ಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News