115 ‘ಮಹತ್ವಾಕಾಂಕ್ಷೆಯ ಜಿಲ್ಲೆ’ಗಳ ಪಟ್ಟಿ ಅಂತಿಮಗೊಳಿಸಲಿರುವ ನೀತಿ ಆಯೋಗ

Update: 2018-01-12 17:04 GMT

ಹೊಸದಿಲ್ಲಿ, ಜ.12: ಈ ವರ್ಷದ ಎಪ್ರಿಲ್ ತಿಂಗಳೊಳಗೆ 115 ‘ಮಹತ್ವಾಕಾಂಕ್ಷೆಯ ಜಿಲ್ಲೆ’ಗಳ ಶ್ರೇಯಾಂಕವನ್ನು ನೀತಿ ಆಯೋಗ ಅಂತಿಮಗೊಳಿಸಲಿದೆ. 115 ಹಿಂದುಳಿದ ಜಿಲ್ಲೆಗಳನ್ನು 10 ಮಾನದಂಡದ ಆಧಾರದಲ್ಲಿ ಪಟ್ಟಿ ಮಾಡಲಾಗುವುದು ಎಂದು ‘ಮಹತ್ವಾಕಾಂಕ್ಷೆಯ ಜಿಲ್ಲೆಗಳ ಪರಿವರ್ತನೆ’ಯ ಕುರಿತು ನಡೆದ ಸಮಾವೇಶದಲ್ಲಿ ನೀತಿ ಆಯೋಗ ತಿಳಿಸಿದೆ. ಪೌಷ್ಟಿಕ ಆಹಾರ, ಶಿಕ್ಷಣ, ಆರೋಗ್ಯ ಸೇವೆ ಮುಂತಾದ 10 ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡು ಈ ಪಟ್ಟಿಯನ್ನು ರಚಿಸಲಾಗುವುದು. ಈ ಜಿಲ್ಲೆಗಳನ್ನು ಕ್ಷಿಪ್ರವಾಗಿ ಪರಿವರ್ತನೆಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೇಂದ್ರ ಸರಕಾರ ಹೊಂದಿದೆ.

ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ವಾಸ್ತವಿಕ ಮೇಲ್ವಿಚಾರಣೆಗೆ ಸೂಕ್ತ ವ್ಯವಸ್ಥೆಯೊಂದನ್ನು ಎಪ್ರಿಲ್ ತಿಂಗಳೊಳಗೆ ರಚಿಸಲಾಗುವುದು ಎಂದು ನೀತಿ ಆಯೋಗದ ವೆಬ್‌ಸೈಟ್‌ನಲ್ಲಿ ಗುರುವಾರ ತಿಳಿಸಲಾಗಿದೆ.

 ಕಳೆದ ವಾರ ನಡೆದಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಉದ್ದೇಶಿತ ಗುರಿ ತಲುಪಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಕ್ತ ಸಲಹೆ, ಪ್ರಸ್ತಾವನೆಗಳನ್ನು ಅಂಬೇಡ್ಕರ್ ಜನ್ಮದಿನಾಚರಣೆಯ ದಿನವಾದ ಎಪ್ರಿಲ್ 14ರ ಮೊದಲು ಸಲ್ಲಿಸುವಂತೆ 115 ಅಪೇಕ್ಷಣೀಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಅಧಿಕಾರಿಗಳಿಗೆ ಸೂಚಿಸಿದ್ದರು. ಕನಿಷ್ಠ ಪ್ರಯತ್ನದಲ್ಲಿ ಗರಿಷ್ಠ ಫಲ ನೀಡುವ ಯೋಜನೆ ರೂಪಿಸುವಂತೆ ಹಾಗೂ ಆಶಾವಾದ ಮತ್ತು ಸಕಾರಾತ್ಮಕತೆಯ ವಾತಾವರಣ ರೂಪಿಸುವಂತೆ ಪ್ರಧಾನಿ ಕರೆ ನೀಡಿದ್ದರು.

ಉಳಿದ ಮೂರು ತಿಂಗಳಲ್ಲಿ ಗೋಚರಕ್ಕೆ ಬರುವಂತಹ ಫಲಿತಾಂಶ ಸಾಧಿಸಲು ಸಂಘಟಿತ ಪ್ರಯತ್ನ ನಡೆಸಲು ಕರೆ ನೀಡಿದ್ದ ಪ್ರಧಾನಿಯವರು, ಈ 115 ಜಿಲ್ಲೆಗಳು ನವಭಾರತ ನಿರ್ಮಾಣ ಕಾರ್ಯದಲ್ಲಿ ಬುನಾದಿಯಾಗಿರಬೇಕು ಎಂದು ಹೇಳಿದ್ದರು.

ನಿರ್ದಿಷ್ಟ ಅಭಿವೃದ್ಧಿ ಮಾನದಂಡಕ್ಕಿಂತ ಬಹಳಷ್ಟು ಹಿಂದುಳಿದಿರುವ ಜಿಲ್ಲೆಗಳ ತ್ವರಿತ ಮಾರ್ಪಾಡು ಪ್ರಕ್ರಿಯೆಗೆ ಪ್ರಮುಖ ಕಾರ್ಯನೀತಿಯನ್ನು ಕೇಂದ್ರ ಸರಕಾರ ಅನುಷ್ಟಾನಗೊಳಿಸಿದೆ.ಈ ಜಿಲ್ಲೆಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಗೊಳ್ಳುವ ಪ್ರಯತ್ನಗಳನ್ನು ಸಂಘಟಿಸಲು ಹೆಚ್ಚುವರಿ ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿ ಶ್ರೇಣಿಯ ಹಿರಿಯ ಸರಕಾರಿ ಅಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News